ಅಬುಧಾಬಿ, ನವೆಂಬರ್ 03, 2021 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಮೀಬಿಯಾ ತಂಡವನ್ನು 45 ರನ್ ಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಟೂರ್ನಿಯಲ್ಲಿ ತಾನಾಡಿದ ಸತತ ನಾಲ್ಕೂ ಪಂದ್ಯಗಳನ್ನು ಜಯಿಸುವುದರೊಂದಿಗೆ ತನ್ನ ಅಜೇಯ ದಾಖಲೆಯನ್ನು ಮುಂದುವರಿಸುವುದರ ಜೊತೆಗೆ ಟೂರ್ನಿಯ 2ನೇ ತಂಡವಾಗಿ ಸೆಮಿ ಫೈನಲ್ ಅರ್ಹತೆ ಖಚಿತಪಡಿಸಿಕೊಂಡಿದೆ.
ಸತತ ಮೂರು ಜಯಗಳೊಂದಿಗೆ ಅಗ್ರಸ್ಥಾನಿಯಾಗಿದ್ದ ಪಾಕಿಸ್ತಾನ ಮಂಗಳವಾರದ ಪಂದ್ಯದಲ್ಲಿ ಟಾಸ್ ಜಯಿಸಿ ಚೇಸಿಂಗ್ ನೆಚ್ಚಿಕೊಳ್ಳುವ ಬದಲು ಮೊದಲು ಬ್ಯಾಟಿಂಗ್ ಮಾಡಿ ಬ್ಯಾಟಿಂಗ್ ಸಾಮಥ್ರ್ಯ ಪರೀಕ್ಷಿಸುವ ಪ್ರಯತ್ನ ನಡೆಸಿತು. ಪಾಕ್ ನಾಯಕನ ನಿರೀಕ್ಷೆಯಂತೆ ಬ್ಯಾಟ್ ಬೀಸಿದ ಆಟಗಾರರ ಉಪಯುಕ್ತ ಕೊಡುಗೆಯಿಂದಾಗಿ ಪಾಕಿಸ್ತಾನ ನಿಗದಿತ 20 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ನಮೀಬಿಯಾ ತಂಡಕ್ಕೆ 190 ರನ್‍ಗಳ ಕಠಿಣ ಗುರಿ ನೀಡಿತು.
ನಾಯಕ ಬಾಬರ್ ಅಝಂ 70 ರನ್, ಮೊಹಮ್ಮದ್ ರಿಝ್ವಾನ್ ಅಜೇಯ 79 ಹಾಗೂ ಮೊಹಮ್ಮದ್ ಹಫೀಝ್ ಅಜೇಯ 32 ರನ್ ಸಿಡಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಕಠಿಣ ಗುರಿ ಬೆನ್ನತ್ತಿದ ನಮಿಬಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮಿಚೆಲ್ ವ್ಯಾನ್ ಲಿಂಜೆನ್ ಕೇವಲ 4 ರನ್ ಸಿಡಿಸಿ ಔಟಾದರು. ಸ್ಟೆಫನ್ ಬಾರ್ಡ್ ಹಾಗೂ ಕ್ರೈಗ್ ವಿಲಿಯಮ್ಸ್ ಜೊತೆಯಾಟದಿಂದ ನಮಿಬಿಯಾ ಚೇತರಿಸಿಕೊಂಡಿತು. ಸ್ಟೆಫನ್ 29 ರನ್ ಸಿಡಿಸಿ ಔಟಾದರು. ನಮಿಬಿಯಾ 55 ರನ್ ಗಳಿಸುವಷ್ಟರಲ್ಲಿ 2ನೇ ವಿಕೆಟ್ ಕಳೆದುಕೊಂಡಿತು. ಕ್ರೇಗ್ ವಿಲಿಯಮ್ಸ್ (40), ಡೇವಿಡ್ ವೀಸ್ (ಅಜೇಯ 43) ಮತ್ತು ಸ್ಟೇಫನ್ ಬ್ರಾಡ್ (29) ಪಾಕ್ ಬೌಲರ್‍ಗಳೆದುರು ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ದಡ ಸೇರಿಸಲು ಅದು ಸಾಕಾಗಲಿಲ್ಲ. ಅಂತಿಮವಾಗಿ ನಮೀಬಿಯಾ ತಂಡ ನಿಗದಿತ 20 ಓವರ್‍ಗಳಲ್ಲಿ ಐದು ವಿಕೆಟ್‍ಗಳನ್ನು ಕಳೆದುಕೊಂಡು 144 ರನ್ ಗಳನ್ನಷ್ಟೆ ಗಳಿಸಲು ಶಕ್ತವಾಗಿ 45ರನ್‍ಗಳಿಂದ ಪಾಕಿಸ್ತಾನಕ್ಕೆ ಶರಣಾಯಿತು.
ಪಾಕ್ ಪರ ಹಸನ್ ಅಲಿ, ಇಮದ್ ವಾಸಿಂ, ಹ್ಯಾರಿಸ್ ರೌಫ್ ಮತ್ತು ಶಾಬದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಮಹಮದ್ ರಿಝ್ವಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೆಲುವಿನೊಂದಿಗೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ಮೊದಲ ಗುಂಪಿನಿಂದ ಈಗಾಗಲೇ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ಇದೀಗ ಎರಡನೇ ಗುಂಪಿನಿಂದ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದೆ.
ಅಂಕಪಟ್ಟಿಯಲ್ಲಿ ಪಾಕಿಸ್ತಾನ ಆಡಿದ 4 ಪಂದ್ಯದಲ್ಲಿ 4ರಲ್ಲೂ ಗೆಲುವು ದಾಖಲಿಸುವ ಮೂಲಕ 8 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 2 ಪಂದ್ಯದಲ್ಲಿ 1 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದ್ದರೆ 3 ಪಂದ್ಯಗಳಲ್ಲಿ 1 ಗೆಲುವು, 2 ಸೋಲು ಕಂಡಿರುವ ನಮಿಬಿಯಾ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಆಡಿದ 2 ಪಂದ್ಯದಲ್ಲೂ ಸೋಲು ಕಂಡು 5ನೇ ಸ್ಥಾನದಲ್ಲಿದ್ದರೆ, ಸ್ಕಾಟ್‍ಲೆಂಡ್ 2 ಸೋಲಿನ ಮೂಲಕ ಅಂಕಪಟ್ಟಿಯ ಕೊನೆಯಲ್ಲಿ ಸ್ಥಾನ ಪಡೆದಿದೆ.
0 comments:
Post a Comment