ಅಬುಧಾಬಿ, ನವೆಂಬರ್ 11, 2021 (ಕರಾವಳಿ ಟೈಮ್ಸ್) : ಅರಬರ ನಾಡಿನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬರುತ್ತಿದ್ದು, ಅಬುಧಾಬಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲಂಡ್ ತಂಡವನ್ನು ರೋಮಾಂಚಕ ಹೋರಾಟದಲ್ಲಿ 5 ವಿಕೆಟ್ ಗಳಿಂದ ಮಣಿಸಿದ ನ್ಯೂಜಿಲ್ಯಾಂಡ್ ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ತಂಡವಾಗಿ ಫೈನಲ್ ಪ್ರವೇಶ ಗಿಟ್ಟಿಸಿಕೊಂಡರೆ, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿ ಹಂತಕ್ಕೆ ತೇರ್ಗಡೆ ಪಡೆದುಕೊಂಡು ಪ್ರಶಸ್ತಿಯತ್ತ ಚಿತ್ತ ನೆಟ್ಟಿದೆ. ಟಾ
ಟಾಸ್ ಜಯಿಸಿದ ಕಿವೀಸ್ ನಾಯಕ ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡು ತನ್ನ ನಿರ್ಧಾರದಲ್ಲಿ ಸಫಲತೆ ಪಡೆದುಕೊಂಡರು. ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್ ಗಳ ಹೋರಾಟಕಾರಿ ಮೊತ್ತ ಪೇರಿಸಿತು.
ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ (24 ಎಸೆತಗಳಲ್ಲಿ 29 ರನ್), ಜಾನಿ ಬೈರ್ಸ್ಟೋವ್ (17 ಎಸೆತಗಳಲ್ಲಿ 13 ರನ್) ಗಳಿಸಿದರು. ಬಳಿಕ ಮೂರನೇ ವಿಕೆಟ್ ಗೆ ಜೊತೆಯಾದ ಡೇವಿಡ್ ಮಲನ್ (30 ಎಸೆತಗಳಲ್ಲಿ 42 ರನ್) ಮೊಯೀನ್ ಅಲಿ 37 ಎಸೆತಗಳಲ್ಲಿ 51ರನ್) ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (3 ಎಸೆತಗಳಲ್ಲಿ 4 ರನ್) ವಿಕೆಟ್ ಬೇಗನೆ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಡೇರಿಲ್ ಮಿಚೆಲ್ ಅಜೇಯ 72 ರನ್ (42 ಎಸೆತ) ಅವರ ಸ್ಫೋಟಕ ಆಟದ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದೊಯ್ದರು. ಮಿಚೆಲ್ ಗೆ ಡೆವೊನ್ ಕಾನ್ವೇ ಉತ್ತಮ ಜೊತೆಯಾಗಿ 38 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಡರಿಲ್ ಮಿಚೆಲ್ ಹೋರಾಟ ಮುಂದುವರಿಸಿದರು. ಜೇಮ್ಸ್ ನೀಶಮ್ ಕೂಡಾ ಉತ್ತಮ ಸಾಥ್ ನೀಡಿದರು.
ನ್ಯೂಜಿಲೆಂಡ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 34 ರನ್ ಅವಶ್ಯಕತೆ ಇತ್ತು. ಡರಿಲ್ ಹಾಗೂ ನೀಶಮ್ ಸ್ಫೋಟಕ ಬ್ಯಾಟಿಂಗ್, ಇಂಗ್ಲೆಂಡ್ ಬೌಲರ್‌ಗಳ ತಲೆ ನೋವು ಹೆಚ್ಚಿಸಿತು. ಇದರ ನಡುವೆ ಡರಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. 11 ಎಸೆತದಲ್ಲಿ 3 ಸಿಕ್ಸರ್ 1 ಬೌಂಡರಿ ಮೂಲಕ ನೀಶಮ್ 27 ರನ್ ಸಿಡಿಸಿ ಔಟಾದರು. 19ನೇ ಓವರ್‌ನಲ್ಲಿ ಡರಿಲ್ ಸತತ 2 ಸಿಕ್ಸರ್ ಸಿಡಿಸಿದರು. ಇದರಿಂದ ಪಂದ್ಯದ ಮೇಲೆ ನ್ಯೂಜಿಲೆಂಡ್ ಸಂಪೂರ್ಣ ಹಿಡಿತ ಸಾಧಿಸಿತು. 19ನೇ ಓವರ್ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸಿದ ಡರಿಲ್ ನ್ಯೂಜಿಲೆಂಡ್ ತಂಡಕ್ಕೆ 5 ವಿಕೆಟ್ ಗೆಲುವು ತಂದುಕೊಟ್ಟರು. ಡರಿಲ್ ಅಜೇಯ 72 ರನ್ ಸಿಡಿಸಿದರು.
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 2019ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 1 ಮೇಡನ್ ಓವರ್ ಸಹಿತ 36 ರನ್ ನೀಡಿ 2 ವಿಕೆಟ್ ಗಳಿಸಿದರು, ಆದಿಲ್ ರಶೀದ್ 39 ರನ್ ನೀಡಿ ಒಂದು ವಿಕೆಟ್ ಗಳಿಸಿದರೆ, ಲಿಯಾಮ್ ಲಿವಿಂಗ್ಸ್ಟೋನ್ 22 ರನ್ ನೀಡಿ 2 ವಿಕೆಟ್ ಗಳಿಸಿದರು.
ಗುರುವಾರ (ನ. 11) ಕೂಟದ ದ್ವಿತೀಯ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ-ಪಾಕಿಸ್ತಾನ ಸೆಣೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಭಾನುವಾರ ನಡೆಯುವ ಪ್ರಶಸ್ತಿ ಹೋರಾಟದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ನ್ಯೂಜಿಲ್ಯಾಂಡ್ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ಸ್ ಗೆ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಐಸಿಸಿ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಕಳೆದ 5 ಸೆಮಿಫೈನಲ್ ಪಂದ್ಯದಲ್ಲಿ ಸತತ ಗೆಲುವು ಕಂಡಿದ್ದ ಇಂಗ್ಲೆಂಡ್ 6ನೇ ಪಂದ್ಯದಲ್ಲಿ ಮುಗ್ಗರಿಸಿದೆ. 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮುಗ್ಗರಿಸಿತ್ತು. ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸುವ ಮೂಲಕ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ.
0 comments:
Post a Comment