ಹಾನಗಲ್, ನವೆಂಬರ್ 02, 2021 (ಕರಾವಳಿ ಟೈಮ್ಸ್) : ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಮತವರು ಜಿಲ್ಲೆಯಲ್ಲೇ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಅಗ್ನಿಪರೀಕ್ಷೆಯಲ್ಲಿ ಸಿಎಂ ಅವರಿಗೆ ಕಹೊ ಅನು¨ವವಾಗಿದೆ. ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಜಯ ಸಾಧಿಸಿದ್ದಾರೆ.
ಹಾನಗಲ್ಲಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ ಅವರ ವಿರುದ್ದ 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ಶ್ರೀನಿವಾಸ ಮಾನೆ 87,490 ಮತಗಳನ್ನು ಪಡೆದರೆ, ಶಿವರಾಜ್ ಸಜ್ಜನ 80,117 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಯಾಝ್ ಶೇಖ್ ಕೇವಲ 927 ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ.
ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದ್ದರಿಂದ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಾಟು ಹೊಂದಿತ್ತು. ಈ ಕಾರಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಹಿತವಾಗಿ ಸಚಿವರು, ಶಾಸಕರು, ಹಲವು ಮಂದಿ ಬಿಜೆಪಿಯ ಘಟಾನುಘಟಿ ನಾಯಕರುಗಳು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಮತದಾರರನ್ನು ಒಲಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದ್ದರು. ಆದರೆ ಮತದಾರ ಮಾತ್ರ ಬಿಜೆಪಿಯನ್ನು ಸರಾಸಗಟಾಗಿ ತಿರಸ್ಕರಿಸಿ “ಕೈ” ಹಿಡಿದಿದ್ದಾರೆ.
ಸಿಂದಗಿ ಕ್ಷೇತ್ರದ ಉಪ ಚುನಾವಣೆಯ 22 ಸುತ್ತಿನ ಮತ ಎಣಿಕೆಯಲ್ಲಿ ಎಲ್ಲಾ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿಕೊಂಡು ಬಂದ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಬಿಜೆಪಿ 93,380 ಮತಗಳನ್ನು ಪಡೆದುಕೊಂಡಿದೆ, ಕಾಂಗ್ರೆಸ್ 62,292 ಮತಗಳನ್ನು ಗಳಿಸಿದೆ. ಜೆಡಿಎಸ್ (ಎಸ್) ಕೇವಲ 4,321 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ, ಅಲ್ಲಿ ಅದು ಠೇವಣಿ ಕಳೆದುಕೊಂಡಿತು. ಇದೇ ವೇಳೆ 1,029 ಮಂದಿ ನೋಟಾ ಚಲಾಯಿಸಿ ಕಣದಲ್ಲಿರುವ ಎಲ್ಲ ಅಭ್ಯರ್ಥಗಳನ್ನು ತಿರಸ್ಕರಿಸಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 69.47ರಷ್ಟು ಮತದಾನವಾಗಿತ್ತು.
ರಮೇಶ ಭೂಸನೂರ ಅವರು ಸಿಂದಗಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಒಂದೇ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾದ ಮೊದಲ ರಾಜಕಾರಣಿಯಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ರಮೇಶ ಭೂಸನೂರ, “ನಾನು 25,000 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ಹೊಂದಿದ್ದೆ ಆದರೆ ಜನರು ನನ್ನನ್ನು 31,088 ಮತಗಳ ಮುನ್ನಡೆಯೊಂದಿಗೆ ಆಯ್ಕೆ ಮಾಡಿದ್ದಾರೆ. ನನ್ನ ಮತ್ತು ನನ್ನ ಪಕ್ಷದ ಮೇಲೆ ವಿಶ್ವಾಸ ತುಂಬಿದ ಮತದಾರರಿಗೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಗೆಲುವಿಗಾಗಿ ಸಚಿವರಾದ ವಿ ಸೋಮಣ್ಣ, ಸಿ ಸಿ ಪಾಟೀಲ್ ಮತ್ತು ಗೋವಿಂದ್ ಕಾರಜೋಳ ಸೇರಿದಂತೆ ಹಿರಿಯ ನಾಯಕರು ಮೂರು ವಾರಗಳ ಕಾಲ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸಿದರು ಎಂದವರು ಹೇಳಿದರು.
0 comments:
Post a Comment