ಬಂಟ್ವಾಳ, ನವೆಂಬರ್ 02, 2021 (ಕರಾವಳಿ ಟೈಮ್ಸ್) : ತಾಲೂಕಿನ ಬುಡೋಳಿ ಗ್ರಾಮದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಆದಿ ದ್ರಾವಿಡ ದಲಿತ ಜನಾಂಗಕ್ಕೆ ಸೇರಿದ ಕೇಶವ ಅವರ ಕುಟುಂಬವು ಮನೆ ಕಳೆದುಕೊಂಡು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಗ್ರಾಮ ಪಂಚಾಯತಿಯಿಂದ ವಸತಿ ಯೋಜನೆಯಡಿಯಲ್ಲಿ ಮನೆ ಸಿಗುವ ಭರವಸೆ ನೀಡಿ ಹಳೆಯ ಮನೆಯನ್ನು ಕೆಡವಲಾಗಿದೆ. ಆದರೆ ಇದೀಗ ಯಾವುದೇ ಯೋಜನೆ ಕೂಡಾ ಸಿಗದೆ ಗುಡಿಸಲಿನಲ್ಲಿ ಈ ಕುಟುಂಬ ಜೀವನ ನಡೆಸುತ್ತಿದ್ದು ಭಾಗ್ಯಜ್ಯೋತಿ ಯೋಜನೆಯಡಿ ಇದ್ದ ವಿದ್ಯುತ್ ಸಂಪರ್ಕ ಕೂಡಾ ಸದ್ಯಕ್ಕೆ ಕಡಿತಗೊಂಡಿರುತ್ತದೆ. ಈ ಕುಟುಂಬಕ್ಕೆ ಶೌಚಾಲಯ, ರೇಷನ್ ಕಾರ್ಡ್ ಕೂಡಾ ಇರುವುದಿಲ್ಲ. ಸರಕಾರದ ಯಾವುದೇ ಸೌಲಭ್ಯಗಳು ಕೂಡಾ ಇವರಿಗೆ ಸಿಕ್ಕಿರುವುದಿಲ್ಲ,
ಕುಟುಂಬದ ಯಜಮಾನ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು ದುಡಿಯಲು ಅಶಕ್ತರಾಗಿದ್ದಾರೆ. ಇವರಿಗೆ ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳಿದ್ದು ಒಬ್ಬಳು 9 ವರ್ಷದ ಹೆಣ್ಣು ಮಗಳು ಹಾಗೂ ವಿವಾಹಿತ ಹೆಣ್ಣು ಮಗಳು ಕೂಡಾ ಸಣ್ಣ ಮಗುವಿನೊಂದಿಗೆ ಇದೇ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ರಾಜಾ ಚೆಂಡ್ತಿಮಾರ್ ಅವರ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ನಿಯೋಗ ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಸಕಲ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ಮಾಡುವಂತೆ ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಇಡೀ ವ್ಯವಸ್ಥೆಯೇ ನಾಚಿಕೆಪಡುವ ಸನ್ನಿವೇಶ ನಿರ್ಮಾಣ ಮಾಡಿದೆ ಎಂದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಂಧರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ ಎಂದವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ನಿಯೋಗದಲ್ಲಿ ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಪ್ರಜಾ ಪರಿವರ್ತನಾ ವೇದಿಕೆಯ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಪುದ್ದೊಟ್ಟು. ಡಿವೈಎಫ್‍ಐ ಮುಖಂಡ, ನ್ಯಾಯವಾದಿ ತುಳಸೀದಾಸ್ ವಿಟ್ಲ, ದಲಿತ ಮುಖಂಡ ನಾರಾಯಣ ನಂದಾವರ ಇದ್ದರು.
0 comments:
Post a Comment