ಬಂಟ್ವಾಳ, ನವೆಂಬರ್ 19, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಅನಿಲ ಟ್ಯಾಂಕರ್ ಚಾಲಕನ ನಿಯಂತ್ರಣ ಮೀರಿ ಹೆದ್ದಾರಿ ಬದಿಗೆ ವಾಲಿಕೊಂಡು ನಿಂತ ಪರಿಣಾಮ ಕೆಲ ಕಾಲ ಆತಂಕದ ಸನ್ನಿವೇಶ ನಿರ್ಮಾಣಗೊಂಡಿತು.
ಮಂಗಳೂರಿನಿಂದ ಅನಿಲ ತುಂಬಿಸಿಕೊಂಡು ಬೆಂಗಳೂರು ಕಡೆ ಸಂಚರಿಸುತ್ತಿದ್ದ ಟ್ಯಾಂಕರ್ ಬೆಳಗ್ಗಿನ ಜಾವ ವೇಳೆ ಪಾಣೆಮಂಗಳೂರು ಹೆದ್ದಾರಿಯ ಮಾರುತಿ ಶೋ ರೂಂ ಬಳಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಪ್ರಯತ್ನದಲ್ಲಿರುವಾಗ ಚಾಲಕನ ನಿಯಂತ್ರಣ ಮೀರಿ ಟ್ಯಾಂಕರ್ ರಸ್ತೆ ಬದಿಗೆ ವಾಲಿಕೊಂಡು ನಿಂತಿದೆ ಎನ್ನಲಾಗಿದೆ.
ಅನಿಲ ಟ್ಯಾಂಕರ್ ಹೆದ್ದಾರಿಯಲ್ಲಿ ವಾಲಿಕೊಂಡು ನಿಂತಿದ್ದರಿಂದ ಸ್ಥಳೀಯರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಸಂಚಾರಿ ಠಾಣೆಯ ಪೊಲೀಸರು ಕ್ರೇನ್ ತರಿಸಿ ಟ್ಯಾಂಕರ್ ಯಥಾಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನಗಳು ಪಾಣೆಮಂಗಳೂರು-ಆಲಡ್ಕ ಒಳ ರಸ್ತೆಯಾಗಿ ಸಂಚರಿಸಿದ ಪರಿಣಾಮ ಹೆದ್ದಾರಿ ಹಾಗೂ ಪಾಣೆಮಂಗಳೂರು ಒಳ ರಸ್ತೆಯಲ್ಲಿ ಟ್ರಾಫಿಕ್ ಜಾಂ ಉಂಟಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವವರು ಒಂದಷ್ಟು ತೊಂದರೆ ಅನುಭವಿಸುವಂತಾಯಿತು.
0 comments:
Post a Comment