ಶಾರ್ಜಾ, ನವೆಂಬರ್ 07, 2021 (ಕರಾವಳಿ ಟೈಮ್ಸ್) : ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿ ಪಾಕಿಸ್ತಾನ ಸೆಮೀಸ್ ಹಂತಕ್ಕೆ ಪ್ರವೇಶಿಸಿದೆ.
ಭಾನುವಾರ ರಾತ್ರಿ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಸ್ಕಾಟ್‌ಲೆಂಡ್ ವಿರುದ್ದ 72 ರನ್ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಝಂ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡರು. ನಾಯಕ ಬಾಬರ್ ಅಝಂ 66 ರನ್ ಸಿಡಿಸಿದರೆ, ಅಂತಿಮ ಹಂತದಲ್ಲಿ ಶೋಯೆಬ್ ಮಲಿಕ್ ಕೇವಲ 18 ಎಸೆತದಲ್ಲಿ 54 ರನ್ ಸಿಡಿಸಿದ ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.
190 ರನ್ ಬೃಹತ್ ಟಾರ್ಗೆಟ್ ಪಡೆದ ಸ್ಕಾಟ್‌ಲೆಂಡ್ ಪಾಕಿಸ್ತಾನ ತಂಡದ ನಿಖರ ದಾಳಿಯ ಮುಂದೆ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಯಿತು. ರಿಚೆ ಬೆರಿಂಗ್ಟನ್ ಅವರ ಏಕಮಾತ್ರ ಅರ್ಧ ಶತಕ (ಅಜೇಯ 54) ಹೊರತುಪಡಿಸಿ ಉಳಿದ ದಾಂಡಿಗರು ವಿಫಲರಾದರು. ಸ್ಕಾಟ್ಲೆಂಡ್ ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 117 ಗಳಿಸಿ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
72 ರನ್ ಗಲುವು ದಾಖಲಿಸಿದ ಪಾಕಿಸ್ತಾನ ಲೀಗ್ ಹಂತದ ಎಲ್ಲ ಐದೂ 5 ಪಂದ್ಯದಲ್ಲಿ ಗೆಲುವು ಸಾಧಿಸಿತು. ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೆ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಏಕೈಕ ತಂಡ ಅನ್ನೋ ದಾಖಲೆ ಬರೆಯಿತು.
ಪಾಕಿಸ್ತಾನ ಪರ ಶೊಯೆಬ್ ಮಲಿಕ್ ಸ್ಫೋಟಕ ಬ್ಯಾಟಿಂಗ್‌ನಿಂದ ಕೇವಲ 18 ಎಸೆತದಲ್ಲಿ ಅರ್ಧ ಶತಕ ದಾಖಲಿಸಿದ್ದು, ಇದು ಟಿ-20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಅತೀ ಕಡಿಮೆ ಎಸೆತದಲ್ಲಿ ದಾಖಲಾದ ಅರ್ಧ ಶತಕವಾಗಿದೆ.
ಇದಕ್ಕೂ ಮೊದಲು ಉಮರ್ ಅಕ್ಮಲ್ ಅವರು 2010 ರಲ್ಲಿ ಆಸೀಸ್ ವಿರುದ್ದ 21 ಎಸೆತಗಳಲ್ಲಿ ಹಾಗೂ 2016 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ದ 22 ಎಸೆತಗಳಲ್ಲಿ ಭಾರಿಸಿದ್ದ ಅರ್ಧ ಶತಕಗಳು ಪಾಕ್ ಪರ ವೇಗದ ಅರ್ಧ ಶತಕವಾಗಿ ದಾಖಲಾಗಿತ್ತು.
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅತೀ ವೇಗದ ಅರ್ಧಶತಕ ಭಾರಿಸಿದ ದಾಖಲೆ ಭಾರತದ ಯುವರಾಜ್ ಸಿಂಗ್ ಹೆಸರಿನಲ್ಲಿದೆ. 2007 ರಲ್ಲಿ ಇಂಗ್ಲಂಡ್ ವಿರುದ್ದ ಸಿಂಗ್ 12 ಎಸೆತಗಳಲ್ಲೆ ಅರ್ಧ ಶತಕ ಭಾರಿಸಿ ಈ ದಾಖಲೆಯನ್ನು ಬರೆದಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶೊಯೆಬ್ ಮಲಿಕ್ ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿದರು. ಮಲಿಕ್ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 1 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಒಳಗೊಂಡಿತ್ತು,
0 comments:
Post a Comment