ಶಾರ್ಜಾ, ನವೆಂಬರ್ 06, 2021 (ಕರಾವಳಿ ಟೈಮ್ಸ್) : ನ್ಯೂಝಿಲ್ಯಾಂಡ್ ತಂಡವು ಸಂಘಟಿತ ಪ್ರದರ್ಶನ ನೀಡುವ ಮೂಲಕ ನಮೀಬಿಯಾ ತಂಡವನ್ನು 52 ರನ್ ಅಂತರದಲ್ಲಿ ಸೋಲಿಸಿ ಟಿ-20 ಅಂಕಪಟ್ಟಿಯಲ್ಲಿ ಆಫ್ಘಾನಿಸ್ತಾನ ತಂಡವನ್ನು ಮೀರಿ 2ನೇ ಸ್ಥಾನಕ್ಕೇರಿದ್ದು, ವಿಶ್ವಕಪ್ ಟೂರ್ನಿಯ ಸೆಮೀಸ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಝಿಲ್ಯಾಂಡ್ ತಂಡ ಉತ್ತಮ ಅರಂಭ ಪಡೆಯಲು ವಿಫಲರಾದರೂ ಕೂಡಾ ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್‍ಗಳ ಮುಕ್ತಾಯಕ್ಕೆ 163 ರನ್ ಗಳಿಸಿತು. ಜೇಮ್ಸ್ ನೀಶಮ್-ಗ್ಲೆನ್ ಫಿಲಿಫ್ಸ್ ಜೋಡಿ 5ನೇ ವಿಕೆಟ್‍ಗೆ 36 ಎಸೆತಗಳಲ್ಲಿ ಅಜೇಯ 76 ರನ್‍ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಫಿಲಿಫ್ಸ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತವಿರುವ ಅಜೇಯ 39 ರನ್ ಗಳಿಸಿದರೆ, ಜೇಮ್ಸ್ ನೀಶಮ್ 23 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಅಜೇಯ 35 ರನ್ ಬಾರಿಸಿದರು. ಕೊನೆಯ 4 ಓವರ್‍ಗಳಲ್ಲಿ ಈ ಜೋಡಿ 67 ರನ್‍ಗಳ ಜತೆಯಾಟ ನಿಭಾಯಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ನ್ಯೂಝಿಲ್ಯಾಂಡ್ ನಿಗದಿಪಡಿಸಿದ್ದ 164 ರನ್‍ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನಮೀಬಿಯಾ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‍ಗೆ ಸ್ಟೆಫನ್ ಬಾರ್ಡ್ ಹಾಗೂ ಮಿಚೆಲ್ ವ್ಯಾನ್ ಲಿಂಗೆನ್ ಜೋಡಿ 47 ರನ್‍ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು. ಈ ಜೋಡಿಯನ್ನು ಬೇರ್ಪಡಿಸಲು ಜೇಮ್ಸ್ ನೀಶಮ್ ಯಶಸ್ವಿಯಾದರು. 25 ಎಸೆತಗಲ್ಲಿ 25 ರನ್ ಬಾರಿಸಿದ್ದ ಲಿಂಗೆನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಸ್ಟಿಫನ್ ಬಾರ್ಡ್ 21 ರನ್ ಬಾರಿಸಿ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕ ಎರಾಸ್ಮಸ್ ಕೇವಲ 3 ರನ್ ಬಾರಿಸಿ ಸೋಧಿಗೆ ವಿಕೆಟ್ ಒಪ್ಪಿಸಿದರು. ಕೇವಲ 6 ರನ್ ಅಂತದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನಮೀಬಿಯಾ ತಂಡಕ್ಕೆ ವಿಕೆಟ್ ಕೀಪರ್ ದಾಂಡಿಗ ಜೇನ್ ಗ್ರೀನ್ ಹಾಗೂ ಡೇವಿಡ್ ವೀಸಾ ತಂಡಕ್ಕೆ ಕೊಂಚ ಆಸರೆಯಾದರು. ಡೇವಿಡ್ ವೀಸಾ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜೇನ್ ಗ್ರೀನ್ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕಿವೀಸ್ ವೇಗಿಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರೆ, ಜೇಮ್ಸ್ ನೀಶಮ್, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು. ಬ್ಯಾಟಿಂಗ್‍ನಲ್ಲಿ ಅಜೇಯ 35 ರನ್ ಬಾರಿಸಿದ್ದಲ್ಲದೇ ಬೌಲಿಂಗ್‍ನಲ್ಲಿ ಒಂದು ವಿಕೆಟ್ ಕಬಳಿಸಿ ಸವ್ಯಸಾಚಿ ಪ್ರದರ್ಶನ ತೋರಿದ ಜೇಮ್ಸ್ ನೀಶಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
0 comments:
Post a Comment