ಮಂಗಳೂರು, ನವೆಂಬರ್ 03, 2021 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಬಿಲ್ ಪಾವತಿಸುವ ಸೌಲಭ್ಯವನ್ನು ಮಂಗಳೂರು ನಗರದ ಎಲ್ಲಾ ಅಂಚೆ ಕಛೇರಿಗಳಲ್ಲಿ ನವೆಂಬರ್ 2 ರಿಂದ ಪ್ರಾರಂಭಿಸಲಾಗಿದೆ.
ಪ್ರಸ್ತುತಃ ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಬಿಲ್ ಪಾವತಿಸುವ ಸೌಲಭ್ಯ ಕೇವಲ ಮಂಗಳೂರು ಒನ್ ಹಾಗೂ ಕೆಲವೊಂದು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಮಾತ್ರ ಲಭ್ಯವಿದೆ. ಇದೀಗ ಸಾರ್ವಜನಿಕರಿಗೆ ಇನ್ನಷ್ಟು ಸಹಕಾರಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗವು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಸೌಲಭ್ಯವನ್ನು ಮಂಗಳೂರಿನ ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದಂತೆ ಇದೀಗ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ ಮತ್ತು ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ ಇವರೊಳಗಿನ ಒಡಂಬಡಿಕೆಯಂತೆ ಮಂಗಳೂರಿನ ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಬಿಲ್ ಪಾವತಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ತಮ್ಮ ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಬಿಲ್ ಮೊತ್ತವನ್ನು ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಪಾವತಿಸಬಹುದು.
ನಗರದ ಅಶೋಕನಗರ, ಫಿಶರೀಸ್ ಕಾಲೇಜು, ಕುಳಾಯಿ, ಪಣಂಬೂರು, ಬೈಕಂಪಾಡಿ, ಗಾಂಧಿನಗರ, ಕುಲಶೇಖರ ಪ್ರಧಾನ ಅಂಚೆ ಕಛೇರಿ, ಶಕ್ತಿನಗರ, ಬಜಾಲ್, ಹಂಪನಕಟ್ಟ, ಕೂಳೂರು, ಶ್ರೀನಿವಾಸ ನಗರ, ಬಲ್ಮಠ, ಕಂಕನಾಡಿ, ಲೀವೆಲ್, ಸುರತ್ಕಲ್, ಬಿಜೈ, ಕಾಟಿಪಳ್ಳ, ಮಂಗಳೂರು ಕಲೆಕ್ಟರೇಟ್, ವಾಮಂಜೂರು, ಬೋಳೂರು, ಕಾವೂರು, ಮಂಗಳೂರು ಪ್ರಧಾನ ಅಂಚೆ ಕಛೇರಿ, ಡಿಸ್ಟ್ರಿಕ್ಟ್ ಕೋರ್ಟ್ ಕೊಡಿಯಾಲ್ ಬೈಲ್, ಮರ್ಕೆರಾ ಹಿಲ್ಸ್ (ಮಲ್ಲಿಕಟ್ಟೆ), ಫಳ್ನೀರ್, ಕೊಂಚಾಡಿ, ಪಡೀಲ್ ಈ ಎಲ್ಲಾ ಅಂಚೆ ಕಚೇರಿಗಳಲ್ಲಿ ಗ್ರಾಹಕರು ನೀರಿನ ಬಿಲ್ ಪಾತಿಸಲು ಅವಕಾಶವಿದೆ.
ಮಂಗಳೂರು ಮಹಾನಗರಪಾಲಿಕೆಯ ನೀರಿನ ಬಿಲ್ ಮಂಗಳೂರು ಅಂಚೆ ವಿಭಾಗದ ಅಧೀನದಲ್ಲಿ ಬರುವ ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೊರಗಿನ ಇಲಾಖಾ ಅಂಚೆ ಕಛೇರಿಗಳಲ್ಲಿ ಕೂಡ ಪಾವತಿಸುವ ಅವಕಾಶ ಲಭ್ಯವಿದೆ.
ನೀರಿನ ಬಿಲ್ ಪ್ರತಿ ಇಲ್ಲದಿದ್ದರೂ ಕೇವಲ ಬಿಲ್ ರಶೀದಿಯಲ್ಲಿ ನಮೂದಾಗಿರುವ ಸೀಕ್ಷೆನ್ಸ್ ನಂಬರ್ ಹೇಳಿ ಬಿಲ್ ಕಟ್ಟಬಹುದು. ಪ್ರಸ್ತುತಃ ಈ ಸೇವೆಯು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಟ್ಟ ನೀರಿನ ಬಿಲ್ ಗಳಿಗೆ ಮಾತ್ರ ಲಭ್ಯವಿರುವುದು. ಬಿಲ್ ಮೊತ್ತ ಪಾವತಿಗೆ ಸೇವಾ ಶುಲ್ಕಗಳು ಅನ್ವಯವಾಗುತ್ತಿದ್ದು, ಬಿಲ್ ಮೊತ್ತ 1 ಸಾವಿರ ರೂಪಾಯಿಗಳ ಒಳಗಿದ್ದರೆ ಜಿ.ಎಸ್.ಟಿ. ಸೇರಿ 6 ರೂಪಾಯಿ ಸೇವಾ ಶುಲ್ಕವಿದ್ದರೆ, ಸಾವಿರದಿಂದ ಮೇಲ್ಪಟ್ಟು ಎರಡೂವರೆ ಸಾವಿರ ರೂಪಾಯಿವರೆಗೆ 12 ರೂಪಾಯಿ ಸೇವಾ ಶುಲ್ಕ, ಎರಡೂವರೆ ಸಾವಿರ ಮೇಲ್ಪಟ್ಟು ಐದು ಸಾವಿರ ರೂಪಾಯಿವರೆಗಿನ ಬಿಲ್ ಗಳಿಗೆ 18 ರೂಪಾಯಿ ಸೇವಾ ಶುಲ್ಕ ಹಾಗೂ ಐದು ಸಾವಿರ ಮೇಲ್ಪಟ್ಟ ಬಿಲ್ ಗಳಿಗೆ 24 ರೂಪಾಯಿ ಸೇವಾ ಶುಲ್ಕ ಇರಲಿದೆ.
ರಾಜ್ಯೋತ್ಸವದ ಪ್ರಯುಕ್ತ ಜನರಿಗೆ ಇದೊಂದು ವಿಶೇಷ ಕೊಡುಗೆಯಾಗಿದ್ದು, ನವೆಂಬರ್ 3 ರಿಂದ ನಗರದ ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment