ಎಷ್ಟೋ ಸಲ ನಾವು ಅಂದುಕೊಂಡದ್ದು ಆಗಿಲ್ಲ ಎಂದಾಗ ಆಕಾಶವೇ ಕಳಚಿ ತಲೆ ಮೇಲೆ ಬಿತ್ತು ಎಂಬಲ್ಲಿವರೆಗೆ ತಲುಪುತ್ತೇವೆ. ಆದರೆ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ಕೆಲವು ಸಲ ನಮ್ಮ ಆಲೋಚನೆಗಳನ್ನೇ ತಲೆಕೆಳಗೆ ಮಾಡುತ್ತದೆ.
ದುಡಿದು ತಮ್ಮ ಎಲ್ಲ ಅಗತ್ಯಗಳಿಗೂ ಸಾಕಾಗುವಷ್ಟು ಸಂಪಾದನೆ ಮಾಡಿ, ಅದರಲ್ಲಿ ಮಿಕ್ಕ ದುಡ್ಡನ್ನು ಉಳಿತಾಯ ಮಾಡಿ ಸ್ವಂತ ಮನೆಕಟ್ಟಿ ಕಷ್ಟಕಾಲಕ್ಕಾಗುವಂತೆ ಅಲ್ಪಸ್ವಲ್ಪ ಕಾಸನ್ನು ಕೂಡಿಟ್ಟು ಉತ್ತಮ ಬದುಕನ್ನು ಕಟ್ಟಬೇಕೆಂಬ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಬಡತನದಿಂದಾಗಿ ತಮ್ಮಲ್ಲಿರುವ ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಮೂಟೆಕಟ್ಟಿ ದೂರ ಎಸೆದು ಬದುಕುವವರಿಗೇನು ಕಮ್ಮಿ ಇಲ್ಲ.
ನಾನು ಇತ್ತೀಚೆಗಷ್ಟೇ ಬಸ್ ನಿಲ್ದಾಣದಲ್ಲಿ ಪೆನ್ನು ಮಾರಿ ಜೀವನ ಸಾಗಿಸುತ್ತಿರುವ ಕುಟುಂಬವೊಂದನ್ನು ನೋಡಿದೆ. ಅವರನ್ನು ನಾನು ತುಂಬಾ ದಿನದಿಂದ ಗಮ£ಸುತ್ತಲೇ ಇದ್ದೆ, ಒಂದು ದಿನ ಅವರ ಕೈಯಿಂದ ಪೆನ್ನು ಕೂಡ ಖರೀದಿಸಿದೆ. ಮತ್ತೊಂದು ದಿನ ಅದೇ ತಾಯಿ, ಮಗಳು ಮತ್ತು ಮಗ ಪೆನ್ನು ಮಾರಾಟ ಮಾಡುತ್ತಿದ್ದರು. ಆ ಪುಟ್ಟ ಹುಡುಗ ಅಂಗಡಿಗಳಲ್ಲಿ ನೇತು ಹಾಕಿದ ವಿಝಿಲ್ ನೋಡಿ ಅದನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನ ತಾಯಿಯ ಕೈಯಲ್ಲಿ ಅದನ್ನು ಕೊಂಡುಕೊಳ್ಳುವ ಶಕ್ತಿ ಇರಲಿಲ್ಲವೇನೋ, ಆ ಹುಡುಗ “ಅದು ಬೇಕು ಬೇಕು” ಎಂದರೂ ಕೇಳಿದರೂ ಕೇಳಿಸದಂತೆ ಮಾಡಿದ ಆ ತಾಯಿ ಮುಂದೆ ಹೋದರು. ಆತ ಅದನ್ನೇ ಆಸೆಯ ಕಂಗಳನ್ನು ಅರಳಿಸಿ ನೋಡುತ್ತಿದ್ದ ದೃಶ್ಯ ಎಂತವರ ಮನಸ್ಸನ್ನು ಕರಗಿಸುವಂತಿತ್ತು.
ನಾವೆಲ್ಲ ನಮಗೇನಾದರು ಬೇಕು ಎಂದಾದರೆ ಅತ್ತು ಕರೆದು ರಚ್ಚೆ ಹಿಡಿದು, ಊಟ ಬಿಟ್ಟು ಕೂತೆವೆಂದರೆ ಸಾಕು... ಅಪ್ಪನೋ ಅಮ್ಮನೋ ತಂದು ಕೊಟ್ಟು ಸಮಾಧಾನ ಮಾಡುತ್ತಿದ್ದದ್ದು ಸರ್ವೇ ಸಾಮಾನ್ಯ... ಆದರೆ ಈ ಪುಟ್ಟ ಬಾಲಕನಿಂದ ಅದೆಲ್ಲ ಆಗುವಂತದ್ದೇನೂ....!!
ಒಂದೊಂದು ಹೊತ್ತಿನ ಊಟಕ್ಕೂ ಹಗಲು ರಾತ್ರಿ ಕಷ್ಟ ಪಡುವ ಅವರು ಊಟದ ಬೆಲೆ ಗೊತ್ತಿಲ್ಲದೆ ಊಟ ಬಿಟ್ಟು ಕೂರುವುದುಂಟೇನು..!!
ಜೀವನದಲ್ಲಿ ನಡೆಯುವ ಒಂದೊಂದು ಘಟನೆಗಳು ಕೂಡ ಒಂದೊಂದು ಪಾಠವನ್ನು ಕಲಿಸುತ್ತದೆ ಅಲ್ವಾ...?
ಇದ್ದುದರಲ್ಲಿ ತೃಪ್ತಿ ಪಡದೆ ಇಲ್ಲದವುಗಳಿಗಾಗಿ ಹಪಹಪಿಸುವ ಮನಸ್ಸುಗಳಿಗೆ ಇವರ ದಿನಚರಿಗಳು ಪಾಠವಾಗುತ್ತದೆ ಎಂದರೆ ತಪ್ಪಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಬದುಕುವುದನ್ನು ಕಲಿಯಬೇಕೆಂಬುದಕ್ಕೆ ಇವರೇ ನಿದರ್ಶನ...
0 comments:
Post a Comment