ಅಬುಧಾಬಿ, ನವೆಂಬರ್ 07, 2021 (ಕರಾವಳಿ ಟೈಮ್ಸ್) : ನ್ಯೂಜಿಲ್ಯಾಂಡ್ ತಂಡವು ಅಫಘಾನಿಸ್ಥಾನ ತಂಡವನ್ನು ನಿರಾಯಾಸವಾಗಿ 8 ವಿಕೆಟ್ ಅಂತರದಿಂದ ಸೋಲಿಸುವ ಮೂಲಕ ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತಕ್ಕೇರಿದೆ. ನ್ಯೂಜಿಲ್ಯಾಂಡ್ ಸೆಮೀಸ್ ಪ್ರವೇಶ ಖಚಿತವಾಗುತ್ತಿದ್ದಂತೆ ಅತ್ತ ಕಿವೀಸ್-ಅಫಘಾನ್ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ನಿಗದಿತ 20 ಓವರ್‍ಗಳ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 124 ರನ್ ಮಾತ್ರ ಗಳಿಸಿತು. ಜರ್ದಾನ್ 73 ರನ್ ಕಾಣಿಕೆ ನೀಡಿದರು.
ಸುಲಭ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ನಿಧಾನಗತಿಯ ಆರಂಭ ಪಡೆಯಿತು. ಮಾರ್ಟಿನ್ ಗಪ್ಟಿಲ್ ಹಾಗೂ ಡರಿಲ್ ಮೆಚೆಲ್ ಮೊದಲ ವಿಕೆಟಿಗೆ 26 ರನ್ ಜೊತೆಯಾಟ ನೀಡಿದರು. ಆದರೆ ಮುಜೀಬ್ ಎಸೆತದಲ್ಲಿ ಮಿಚೆಲ್ ವಿಕೆಟ್ ಪತನಗೊಂಡಿತು. ಮಿಚೆಲ್ 17 ರನ್ ಸಿಡಿಸಿ ಔಟಾದರು. ಮಾರ್ಟಿನ್ ಗಪ್ಟಿಲ್ 28 ರನ್ ಸಿಡಿಸಿ ರಶೀದ್ ಖಾನ್‍ಗೆ ವಿಕೆಟ್ ಒಪ್ಪಿಸಿದರು.
ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆವೋನ್ ಕೊನ್ವೆ ಜೊತೆಯಾಟದಿಂದ ನ್ಯೂಜಿಲೆಂಡ್ ಚೇತರಿಸಿಕೊಂಡಿತು. ಕೇನ್ ವಿಲಿಯಮ್ಸನ್ ಅಜೇಯ 40 ರನ್ ಹಾಗೂ ಕೊನ್ವೇ ಅಜೇಯ 36 ರನ್ ಸಿಡಿಸಿದರು. ನ್ಯೂಜಿಲೆಂಡ್ 18.1 ಓವರ್‍ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಆಫ್ಘಾನ್ ವಿರುದ್ಧದ ಗೆಲುವಿನಿಂದ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ ಪಡೆದರೆ, ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ನವೆಂಬರ್ 8 ರಂದು ನಮಿಬಿಯಾ ವಿರುದ್ಧ ಅಂತಿಮ ಪಂದ್ಯ ಆಡಲಿದೆ.
ಮೊದಲ ಗುಂಪಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್ ಹಂತ ಪ್ರವೇಶಿಸಿದೆ. ಎರಡನೇ ಗುಂಪಿನಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದೆ. ಅದೇ ರೀತಿ ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ನಮಿಬಿಯಾ, ಸ್ಕಾಟ್‍ಲೆಂಡ್ ತಂಡಗಳು ಕೂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಕಣದಲ್ಲಿ ನಾಲ್ಕು ತಂಡಗಳು ಮಾತ್ರ ಉಳಿದುಕೊಂಡಿದ್ದು, ಇವುಗಳ ಪೈಕಿ ಪ್ರಶಸ್ತಿ ಹಂತಕ್ಕೆ ಏರುವ 2 ತಂಡಗಳ ಬಗ್ಗೆ ಕುತೂಹಲ ಆರಂಭವಾಗಿದೆ.
ನವೆಂಬರ್ 10 ರಂದು ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ನವೆಂಬರ್ 11 ರಂದು 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.
0 comments:
Post a Comment