ಬಂಟ್ವಾಳ, ನವೆಂಬರ್ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಕಾರಿಂಜದ ಮಹಾತೋಭಾರ ಶ್ರೀ ಕಾರಿಂಜ ಕ್ಷೇತ್ರದ ಶಿವನ ಸಾನಿಧ್ಯದಲ್ಲಿ ವಿಹಾರಕ್ಕೆಂದು ಬಂದಿದ್ದ ಯುವಕರ ತಂಡ ಪಾದರಕ್ಷೆ ಧರಿಸಿ ಒಳಪ್ರವೇಶಿಸಿ ಮೋಜು-ಮಸ್ತಿ ಮಾಡುತ್ತಿರುವ ವೀಡಿಯೋ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ದೇವಸ್ಥಾನದ ಆಡಳಿತ ಮಂಡಳಿ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ ಹಾಗೂ ಹಿಂದೂ ಸಂಘಟನೆಗಳು ಯುವಕರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ಸೌಮ್ಯ ನೇತೃತ್ವದ ಪೊಲೀಸರು ನಾಲ್ಕು ಮಂದಿ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬಂಧಿತ ಯುವಕರನ್ನು ಉಳ್ಳಾಲ ತಾಲೂಕು, ಉಳ್ಳಾಲ-ಮಾಸ್ತಿಕಟ್ಟೆ ನಿವಾಸಿ ಬಶೀರ್ ಅವರ ಪುತ್ರ ಬುಶೇರ್ ರೆಹಮಾನ (20), ಉಳ್ಳಾಲ-ಮುಕ್ಕಚ್ಚೇರಿ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಇಸ್ಮಾಯಿಲ್ ಅರ್ಹಮಾಜ್ (22), ಉಳ್ಳಾಲ-ಹಳೇಕೋಟೆ ನಿವಾಸಿ ಉಮ್ಮರ್ ಫಾರೂಕ್ ಅವರ ಪುತ್ರ ಮಹಮ್ಮದ್ ತಾನಿಶ್ (19) ಹಾಗೂ ಪೆರ್ಮನ್ನೂರು-ಬಬ್ಬುಕಟ್ಟೆ ನಿವಾಸಿ ಬದ್ರುದ್ದೀನ್ ಅವರ ಪುತ್ರ ಮೊಹಮ್ಮದ್ ರಶಾದ್ (19) ಎಂದು ಪೊಲೀಸರು ಹೆಸರಿಸಿದ್ದಾರೆ.
ಕೆಎಲ್ 14 ಎಎ 5569 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದ ಐದಾರು ಮಂದಿ ಯುವಕರ ತಂಡ ಕಾರಿಂಜ ಕ್ಷೇತ್ರದಲ್ಲಿ ಮೋಜು-ಮಸ್ತಿ ಮಾಡಿದ ಬಳಿಕ ಪಾದರಕ್ಷೆ ಧರಿಸಿಕೊಂಡೇ ದೇವಸ್ಥಾನದ ಒಳಾಂಗಣಕ್ಕೆ ಪ್ರವೇಶಿಸಿ ಅಲ್ಲಿಯೂ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದ್ದು, ಬಳಿಕ ಈ ದೃಶ್ಯಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಯುವಕರ ವರ್ತನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಕೂಡಾ ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಬುಧವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ನೆತ್ತರಕೆರೆ ನೇತೃತ್ವದ ತಂಡ ಆರೋಪಿತ ಯುವಕರ ಬಂಧನಕ್ಕೆ 2 ದಿನಗಳ ಗಡುವು ನೀಡಿದ್ದರು.
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡಾ ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪರವಾಗಿ ವಿನಯ ಕುಮಾರ್ ಅವರು ಠಾಣೆಗೆ ನೀಡಿದ ದೂರಿನ ಪ್ರಕಾರ ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2021 ಕಲಂ 295 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಕೋಮುಸೂಕ್ಷ್ಮ ಪ್ರಕರಣ ಇದಾಗಿದ್ದರಿಂದ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಸೈ ಸೌಮ್ಯ ಅವರು ಆರೋಪಿ ಯುವಕರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
0 comments:
Post a Comment