ಹಾಜಬ್ಬ ಅವರು ದಕ್ಷಿಣ ಕನ್ನಡದ ಒಬ್ಬ ಸಮಾಜ ಸೇವಕ. ಅವರು ತನ್ನ ದಿನಕೂಲಿಯನ್ನು ಕಿತ್ತಲೆ ಹಣ್ಣು ಮಾರಿ ಸಂಪಾದಿಸುತ್ತಿದ್ದರು. ಇದನ್ನು ಅವರು ತನ್ನೂರ ಶಾಲೆ ನಿರ್ಮಾಣಕ್ಕಾಗಿ ಸಹಾಯ ಮಾಡಿದರು. ನನ್ನಂತೆ ನನ್ನ ಪರಿಸರದ ಮಕ್ಕಳು ಅವಿದ್ಯಾವಂತರಾಗಬಾರದೆಂಬ ಉದ್ದೇಶದಿಂದ ಕೂಲಿ ಕೆಲಸ ಮಾಡಿ ಸ್ವಂತ ಕುಟುಂಬದವರನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಶಾಲೆಯನ್ನೇ ಉದ್ಧಾರ ಮಾಡುವುದರಲ್ಲಿಯೇ ಜೀವನ ಕಳೆಯುತ್ತಿದ್ದರು. ನೋಡಲು ಸಾಮಾನ್ಯ ವ್ಯಕ್ತಿಯಾದರೂ ರಾಷ್ಟ್ರಪತಿ ಕೈಯಿಂದ ಪದ್ಮಶ್ರೀ ಪಡೆದು ಕೇವಲ ದಕ್ಷಿಣ ಕನ್ನಡಕ್ಕೆ ಮಾತ್ರವಲ್ಲದೆ ಪ್ರತಿಯೊಂದು ಮೂಲೆ ಮೂಲೆಗಳಿಗೂ ಹೆಸರುವಾಸಿಯಾದರು.
ಹರೇಕಳ ಹಾಜಬ್ಬ ಅವರು ತಮ್ಮದೇ ಆದ ತುಲನಾತ್ಮಕವಾಗಿ ನಿರ್ಬಂಧಿತ ಸಂದರ್ಭಗಳ ಹೊರತಾಗಿಯೂ ತಮ್ಮ ಸ್ಥಳೀಯ ಗ್ರಾಮದಲ್ಲಿ ಶಿಕ್ಷಣದ ಕಾರಣಕ್ಕಾಗಿ ಅವರು ನೀಡಿದ ಅಸಾಮಾನ್ಯ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಉಳಿತಾಯದ ಒಂದು ಭಾಗವನ್ನು ಕಿತ್ತಳೆ ಮಾರಾಟದಿಂದ ಉಳಿಸಿಕೊಂಡರು, ಅವರು ಬಂದ ಪ್ರದೇಶದಲ್ಲಿ ಶಾಲೆಯನ್ನು ಪ್ರಾರಂಭಿಸಿದರು, ಇದರಿಂದ ಅಲ್ಲಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಸರಕಾರಿ ಬೆಂಬಲ ಹಾಗೂ ಖಾಸಗಿ ವ್ಯಕ್ತಿಗಳ ದೇಣಿಗೆಯಿಂದ ಬೆಳೆದು ನಿಂತಿರುವ ಈ ಶಾಲೆ ಇಂದು ಹಾಜಬ್ಬ ಶಾಲೆ ಎಂದೇ ಖ್ಯಾತಿ ಪಡೆದಿದೆ. ಅವರನ್ನು ಪ್ರೀತಿಯಿಂದ ‘ಅಕ್ಷರ ಸಂತ’ ಎಂದು ಕರೆಯುತ್ತಾರೆ. ಹಾಜಬ್ಬ ಅವರ ಮುಂದಿನ ಕನಸೆಂದರೆ ತಮ್ಮ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ನಿರ್ಮಿಸುವುದು. ಖಂಡಿತವಾಗಿಯೂ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ. ಅನಾವಶ್ಯಕವನ್ನು ನಿರ್ಮಿಸುವ ಕನಸು ಅವರಿಗಿಲ್ಲ. ಅವರಿಗೆ ಕೇವಲ ಶಿಕ್ಷಣ ನೀಡುವ ಉದ್ಧೇಶ ಮಾತ್ರವಾಗಿರುತ್ತದೆ.
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರಕಾರ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ಮಂಗಳೂರಿನ ಹರೇಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ಶಿಕ್ಷಣ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಶಿಕ್ಷಣ, ಭಾಷೆಗಳು ಗೊತ್ತಿಲ್ಲದಿದ್ದರೆ ಸಮಾಜದಲ್ಲಿ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಅನುಭವಕ್ಕೆ ಬಂದಿತು. ಹೀಗಾಗಿ, ತನ್ನಂತೆ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ನಿರ್ಧರಿಸಿದ ಅವರು ಕಿತ್ತಳೆ ಮಾರಿದ ಹಣದಿಂದ ಬಡ ಮಕ್ಕಳಿಗಾಗಿ ಊರಿನಲ್ಲಿ ಶಾಲೆ ಕಟ್ಟಿಸಿದರು.
ದುಬಾರಿ ಹಣ ಕೊಟ್ಟು ಶಿಕ್ಷಣ ಕಲಿಯಲು ಸಾಧ್ಯವಾಗದ ಬಡ ಮಕ್ಕಳಿಗೆಂದು ತಮ್ಮೂರಲ್ಲಿ ಶಾಲೆಯೊಂದನ್ನು ಆರಂಭಿಸಬೇಕೆಂದು ಹಾಜಬ್ಬ ನಿರ್ಧರಿಸಿದರು. ಅದಕ್ಕಾಗಿ ಹಾಜಬ್ಬ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಬಿಇಓ ಕಚೇರಿಗೆ ಅಲೆದಾಡಿದರು. ಹಣ್ಣಿನ ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಓಡಾಡಿದ ಹಾಜಬ್ಬನವರಿಗೆ ಶಾಲೆಯನ್ನು ಆರಂಭಿಸಲು ಅನುಮತಿ ದೊರೆಯಲಿಲ್ಲ, ಹಣ್ಣಿನ ಮಾರಾಟದಿಂದ ಬರುತ್ತಿದ್ದ ಹಣವೂ ಇಲ್ಲದಂತಾಯಿತು. ಆದರೂ ಧೃತಿಗೆಡದ ಹಾಜಬ್ಬನವರು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು, 1999ರ ಜೂ. 6ರಂದು ನ್ಯೂಪಡ್ಪು ಗ್ರಾಮದ ಮದರಸಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದ್ದರು.
ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂಪಾಯಿ ಹಿಡಿದುಕೊಂಡು ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. ಬಳಿಕ 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಕೊನೆಗೂ ಹಠ ಸಾಧಿಸಿಯೇ ಬಿಟ್ಟರು.
“ಇಂದು ಪ್ರತಿಯೊಬ್ಬರಿಗೂ ಅಚ್ಚರಿ ಮೂಡುವಂತೆ ಮಾಡಿದರು ಹಾಜಬ್ಬ” ಪದ್ಮÀ್ಮಶ್ರೀ ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ. ಇದನ್ನು ನಮ್ಮ ಹಾಜಬ್ಬ ಪಡೆದಿರುವುದು ನಿಜಕ್ಕೂ ಪ್ರತಿಯೊಬ್ಬರನ್ನೂ ಅಚ್ಚರಿ ಮೂಡಿಸಿದೆ. ಸರಳ ವ್ಯಕ್ತಿತ್ವ ಸಾಮಾನ್ಯ ಜೀವನ ಸಾಗಿಸುತ್ತಿರುವ ಹಾಜಬ್ಬ ಇಂದು ರಾಷ್ಟ್ರಪತಿಗೂ ಅಚ್ಚರಿ ಮೂಡಿಸಿದ್ದಾರೆ. ನಿನ್ನೆ ವಿಮಾನದಲ್ಲಿ ದೆಹಲಿಗೆ ತೆರಳಿದ ಹಾಜಬ್ಬನವರನ್ನು ಬರಮಾಡಿಕೊಂಡ ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ಕೂಡ ಹಾಜಬ್ಬನವರ ಉಡುಗೆ ಹಾಗೂ ಸರಳತೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಾಗ ತಮ್ಮ ಚಪ್ಪಲಿಗಳನ್ನು ಕುಳಿತ ಜಾಗದಲ್ಲೇ ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಿಳಿ ಶರ್ಟ್, ಬಿಳಿ ಪಂಚೆಯುಟ್ಟು ಬರಿಗಾಲಿನಲ್ಲಿ ತಮ್ಮೆದುರು ನಿಂತ ಹಾಜಬ್ಬನವರ ಸರಳತೆ ಮತ್ತು ವಿನಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕಣ್ಣರಳಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ರಾಷ್ಟ್ರಪತಿಗಳು ನಿಂತ ಜಾಗಕ್ಕೆ ಕರೆದುಕೊಂಡು ಹೋಗುವವರೆಗೂ ಕೈ ಮುಗಿದುಕೊಂಡೇ ನಡೆದು ಹೋದ ಹಾಜಬ್ಬನವರು ಪ್ರಶಸ್ತಿ ಸ್ವೀಕರಿಸುವಾಗಲೂ ತಲೆ ಬಗ್ಗಿಸಿ ಕೈ ಮುಗಿದು ನಿಂತಿದ್ದರು. ರಾಷ್ಟ್ರಪತಿಗಳೇ ಅವರಿಗೆ ಕ್ಯಾಮೆರಾ ಕಡೆ ನೋಡುವಂತೆ ಸನ್ನೆ ಮಾಡಿದ ಮೇಲೆ ಅವರು ಕ್ಯಾಮೆರಾದ ಕಡೆ ನೋಡಿ ನಗು ಚೆಲ್ಲಿದರು.
ಕಿತ್ತಳೆ ತಿಂದು ಸಿಪ್ಪೆಯನ್ನು ಎಸೆದಂತೆ ಅಂದು ಹಾಜಬ್ಬರನ್ನು ಕೂಡ ಕೆಲವರು ಎಸೆದರು ಆದರೆ ಅದೇ ಹಾಜಬ್ಬ ತನ್ನ ಛಲದಿಂದ ಮುಂದೆ ಬಂದು ಪ್ರಶಸ್ತಿ ಪಡೆಯುವ ಮೂಲಕ ಇನ್ನಷ್ಟು ಮಂದಿಗೆ ಛಲ ನೀಡಿದ್ದಾರೆ. ವ್ಯಕ್ತಿ ಯಾರೆ ಆಗಿರಲಿ ಹೇಗೆ ಇರಲಿ ಛಲದಿಂದ ಮುಂದೆ ಬಂದರೆ ಅವರಿಗೆ ಖಂಡಿತವಾಗಿಯೂ ಸೋಲು ಇರಲ್ಲ. ಎಷ್ಟೇ ಕೋಟ್ಯಾಂತರ ಆಸ್ತಿ ಇದ್ದರೇನು ಪ್ರಯೋಜನ ಒಬ್ಬ ಅವಿಧ್ಯಾವಂತನಿಗೆ ಸಾಧನೆ ಮಾಡಲು ಸಾಧ್ಯವಿದೆಂದು ಹಾಜಬ್ಬ ಇಂದು ತೋರಿಸಿಕೊಟ್ಟಿದ್ದಾರೆ. ವಿದ್ಯೆ ಇಲ್ಲದೆ ಪೆÇೀಲಿಗಳ ಸಾಲಿಗೆ ಸೇರುತ್ತಿರುವ ಮಕ್ಕಳನ್ನು ಅದೆಷ್ಟೋ ನೀವು ಕಂಡಿರಬಹುದು. ಹಾಜಬ್ಬ ತನ್ನ ಹಠದಿಂದ ಅದೆಷ್ಟೋ ವಿದ್ಯಾರ್ಥಿಗಳ ಬಾಳನ್ನು ಕತ್ತಲಿನಿಂದ ಬೆಳಕು ನೀಡಿ ತಮ್ಮ ಸ್ಥಾನವನ್ನು ಪಡೆದಿರುವಿರಿ. ಹಾಜಬ್ಬ ಅವಿದ್ಯಾವಂತರಾದರೂ ಇಂದು ಮಕ್ಕಳಿಗೆ ಶಿಕ್ಷಣ ಕೊಟ್ಟು ವಿದ್ಯಾವಂತರಾಗಿದ್ದಾರೆ. ನಿಮ್ಮ ಸಾಧನೆಯನ್ನು ಮೆಚ್ಚುತ್ತ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ತಮಗೆ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
0 comments:
Post a Comment