ಬಂಟ್ವಾಳ, ನವೆಂಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಉಪ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರಾಗಿದ್ದ ವೃಶಬೇಂದ್ರ ಹೆಬ್ಬಾರ್ ಅವರು ಅಂಚೆ ಕಚೇರಿಯ ವ್ಯವಹಾರಕ್ಕೆಂದು ಹಣ ಪಡೆದು ಅಂಚೆ ಕಚೇರಿ ಬ್ರಾಂಚಿಗೆ ಕಳಿಸದೆ ತನ್ನ ಸ್ವಂತಕ್ಕೆ ಬಳಸಿ ಅಂಚೆ ಕಚೇರಿಗೆ ವಂಚಿಸಿದ ಬಗ್ಗೆ ಜೋಡುಮಾರ್ಗ ಸಹಾಯಕ ಅಂಚೆ ಕಚೇರಿಯ ಮುಖ್ಯಸ್ಥ ಲೋಕನಾಥ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವೃಶಬೇಂದ್ರ ಹೆಬ್ಬಾರ್ ಅವರು ಮಂಚಿ ಉಪ ಅಂಚೆ ಕಛೇರಿಯಲ್ಲಿ 2014 ರ ಎಪ್ರಿಲ್ 28 ರಿಂದ 2018 ರ ಸೆಪ್ಟೆಂಬರ್ 10ರವರೆಗೆ ಉಪ ಅಂಚೆ ಪಾಲಕರಾಗಿ ಕರ್ತವ್ಯದಲ್ಲಿದ್ದು, ಇವರ ಅಧೀನಕ್ಕೆ ಬರುವ ಇರಾ ಶಾಖಾ ಅಂಚೆ ಕಛೇರಿ, ಸಾಲೆತ್ತೂರು ಶಾಖಾ ಅಂಚೆ ಕಚೇರಿ ಹಾಗೂ ಕುಲಾಲ್ ಶಾಖಾ ಅಂಚೆ ಕಛೇರಿಗೆಂದು ಕ್ರಮವಾಗಿ 2018 ರ ಸೆಪ್ಟೆಂಬರ್ 5 ರಂದು ಇರಾ ಶಾಖಾ ಅಂಚೆ ಕಚೇರಿಗೆಂದು 30 ಸಾವಿರ, ಸೆ 7 ರಂದು ಸಾಲೆತ್ತೂರು ಶಾಖಾ ಅಂಚೆ ಕಚೇರಿಗೆಂದು 20 ಸಾವಿರ ಹಾಗೂ ಸೆ 10 ರಂದು ಕುಳಾಲು ಶಾಖಾ ಅಂಚೆ ಕಚೇರಿಗೆಂದು 30 ಸಾವಿರ ರೂಪಾಯಿ ನಗದು ಹಣವನ್ನು ಕಚೇರಿಯ ದೈನಂದಿನ ವ್ಯವಹಾರಕ್ಕೆಂದು ಕಳುಹಿಸಿದ ಹಾಗೆ ಇಲಾಖಾ ಲೆಕ್ಕದಲ್ಲಿ ತೋರಿಸಿ ಆಯಾ ಬ್ರಾಂಚ್ ಅಂಚೆ ಕಛೇರಿಗಳಿಗೆ ಕಳುಹಿಸದೇ ಸದ್ರಿ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಪಡಿಸಿಕೊಂಡು ಒಟ್ಟು 80 ಸಾವಿರ ರೂಪಾಯಿ ಹಣವನ್ನು ಅಂಚೆ ಇಲಾಖೆಗೆ ವಂಚಿಸಿರುವುದಾಗಿ ಲೋಕನಾಥ ಅವರು ಠಾಣೆಗೆ ನೀಡಿದ ದೂರಿನಂತೆ ಈ ಬಗ್ಗೆ ಅಪರಾಧ ಕ್ರಮಾಂಕ 147/2021 ಕಲಂ 409, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment