ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಅಪಾಯಕಾರಿ ಬೆಳವಣಿಗೆ : ಬೇಬಿ ಕುಂದರ್ ಆತಂಕ - Karavali Times ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಅಪಾಯಕಾರಿ ಬೆಳವಣಿಗೆ : ಬೇಬಿ ಕುಂದರ್ ಆತಂಕ - Karavali Times

728x90

26 November 2021

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಅಪಾಯಕಾರಿ ಬೆಳವಣಿಗೆ : ಬೇಬಿ ಕುಂದರ್ ಆತಂಕ

ಬಂಟ್ವಾಳ, ನವೆಂಬರ್ 27, 2021 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವುದು ಅಪಾಯಕಾರಿ ಬೆಳವಣಿಗೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ಜಿಲ್ಲೆಯ ಪುತ್ತೂರು ಸಹಿತ ವಿವಿಧೆಡೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ಅವರು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಧರ್ಮ-ಧರ್ಮದ ಮದ್ಯೆ ಹಾಗೂ ಜಾತಿ-ಜಾತಿಗಳ ಮಧ್ಯೆ ವಿಭಜಿಸಿ ಹಸ್ತಕ್ಷೇಪ ನಡೆಸುವ ಕೆಲ ಸಂಘಟನೆಗಳು ನಡೆಸುತ್ತಿರುವ ರಾಜಕೀಯ ಹಾಗೂ ಇನ್ನಿತರ ಸ್ವಾರ್ಥ ಹಿತಾಸಕ್ತಿಯ ಕೃತ್ಯಗಳು ಅತ್ಯಂತ ಖಂಡನೀಯವಾಗಿದ್ದು, ದೇಶದ ಭವಿಷ್ಯದ ಭದ್ರ ಬುನಾದಿಯಾಗಿರುವ ವಿದ್ಯಾರ್ಥಿ ಸಮುದಾಯ ಇಂತಹ ನೀಚ ಕೃತ್ಯಕ್ಕೆ ಬಲಿಯಾಗುತ್ತಿರುವುದು ಖೇದಕರ ಎಂದವರು ವಿಷಾದಿಸಿದ್ದಾರೆ. 

ಹಸಿ ಮಣ್ಣಿಗೆ ಕಲ್ಲೆಸೆದಾಗ ಅದು ಯಾವ ರೀತಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆಯೋ ಅದೇ ರೀತಿ ಸಣ್ಣ ವಯಸ್ಸಿನ ವಿದ್ಯಾರ್ಥಿಗಳ ಮನಸ್ಸಿಗೆ ಕೆಟ್ಟ ವಿಚಾರಗಳನ್ನು ಅವರ ಮೆದುಳಿಗೆ ತುಂಬಿಸಿದಾಗ ಆ ವಿಚಾರಗಳು ಮನಸ್ಸಿನಲ್ಲಿ ಉಳಿಯುವುದು ಸ್ವಾಭಾವಿಕ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅವರನ್ನು ದಾರಿ ತಪ್ಪಸಿದಂತಾಗುತ್ತದೆ. ಸಂಘಟನೆಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುವುದು ಅಗತ್ಯವಾಗಿದೆ. 

ಈಗಾಗಲೇ ಉನ್ನತ ವಿದ್ಯಾಭ್ಯಾಸ ಪಡೆದುಕೊಂಡು ಸಮಾಜಕ್ಕೆ ಅರ್ಪಿತಗೊಂಡಿರುವ ಸುಶಿಕ್ಷಿತ ಸಮುದಾಯ ಸೂಕ್ತ ಆರೋಗ್ಯಕರ ಉದ್ಯೋಗ ಇಲ್ಲದೆ ಜೀವನದ ಸ್ವಾದವನ್ನೇ ಕಳೆದುಕೊಳ್ಳುತ್ತಿರುವ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ ಗಳೊಳಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮನಸ್ಸಿಗೆ ವಿಷ ಬೀಜ ಬಿತ್ತುವ ಮಂದಿಗಳು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುವ ಅನಿವಾರ್ಯತೆ ಇದೆ ಎಂದಿರುವ ಬೇಬಿ ಕುಂದರ್ ಅವರು, ಇಂತಹ ಕುಕೃತ್ಯ, ಘಟನೆಗಳಿಗೆ ಕಾರಣವಾಗುವ ಮಂದಿಗಳು ಯಾರೇ ಆದರೂ ಅಂತವರಿಗೆ ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳಾಗಲೀ, ರಾಜಕೀಯ ಪಕ್ಷಗಳಾಗಲೀ, ಸಂಘಟನೆಗಳಾಗಲೀ ಬೆಂಬಲಿಸಬಾರದು. ಇಂತಹ ಕೃತ್ಯ ಎಸಗುವವರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಜರೂರು ಇದೆ ಎಂದವರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಅಪಾಯಕಾರಿ ಬೆಳವಣಿಗೆ : ಬೇಬಿ ಕುಂದರ್ ಆತಂಕ Rating: 5 Reviewed By: karavali Times
Scroll to Top