ಬಂಟ್ವಾಳ, ನವೆಂಬರ್ 28, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಕಸ್ಬಾ ಗ್ರಾಮದ ಬಾರೆಕಾಡು ಸಮೀಪದ ಕಲ್ಲಗುಡ್ಡೆಯಲ್ಲಿ ಶನಿವಾರ ಸಂಜೆ ನಡೆದ ರಸ್ತೆ ಅಫಘಾತಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಘರ್ಷಣೆಯ ಹಂತಕ್ಕೇರಿ ಹೊಐಕೈ ನಡೆದು ಬಂಟ್ವಾಳ ನಗರ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಬಾರೆಕಾಡು ನಿವಾಸಿ ಅಬೂಬಕ್ಕರ್ ಅವರ ಪುತ್ರ ಇರ್ಶಾದ್ (23) ಅವರು ದೂರು ನೀಡಿದ್ದು, ಶನಿವಾರ ಅಪರಾಹ್ನ 3.30 ರ ವೇಳೆಗೆ ಸಹೋದರ ಕರೆ ಮಾಡಿ ಕಲ್ಲಗುಡ್ಡೆ ಸಾರ್ವಜನಿಕ ರಸ್ತೆಯಲ್ಲಿ ತನ್ನ ಸ್ಕೂಟರಿಗೆ ಅಟೋ ರಿಕ್ಷಾ ಡಿಕ್ಕಿಯಾಗಿ ಅಪಘಾತವಾಗಿದೆ ಎಂದು ತಿಳಿಸಿದಂತೆ ಇರ್ಶಾದ್ ಹಾಗೂ ಆತನ ಗೆಳೆಯ ಶಾಹಿಲ್ ಜೊತೆಗೂಡಿ ಘಟನೆ ಸ್ಥಳಕ್ಕೆ ಬಂದು ನಂತರ ಅಪಘಾತದ ಬಗ್ಗೆ ಮಾತುಕತೆ ಮೂಲಕ ವಿಚಾರವನ್ನು ಬಗೆಹರಿಸಿಕೊಂಡು, ಸಂಜೆ 4 ಗಂಟೆಗೆ ಗೆಳೆಯ ಶಾಹಿಲ್ ಜೊತೆಗೂಡಿ ತುಂಬ್ಯಾ ಜಂಕ್ಷನ್ ಬಳಿ ರಾಮಮಂದಿರ ತಲುಪಿದಾಗ ಪರಿಚಯಸ್ಥರೇ ಆದ ಆರೋಪಿಗಳಾದ ಧನುಷ, ಕೀರ್ತನ್ ಹಾಗೂ ಬಿಳಿ ಅಂಗಿ ಹಾಕಿದ ಇನ್ನೊಬ್ಬ ವ್ಯಕ್ತಿ ತಡೆದು ನಿಲ್ಲಿಸಿ ಧನುಷ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ನೀವು ಯಾಕೆ ಇಲ್ಲಿಗೆ ಬಂದದ್ದು ಎಂದು ಪ್ರಶ್ನಿಸಿ, ಕಲ್ಲಿನಲ್ಲಿ ಹಲ್ಲೆ ನಡೆಸಿರುತ್ತಾರೆ. ಬಳಿಕ ನಿಮ್ಮನ್ನು ತೆಗೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ ಎಂದು ದೂರಲಾಗಿದೆ.
ಇರ್ಶಾದ್ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 137/2021 ಕಲಂ 341, 504, 324, 323, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಬಿ ಕಸ್ಬಾ ಗ್ರಾಮದ ಬಂಟ್ವಾಳ ಎಸ್ ವಿ ಎಸ್ ಕಾಲೇಜು ರಸ್ತೆ ನಿವಾಸಿ ದಿವಂಗತ ಜಯರಾಮ ಅವರ ಪುತ್ರ ಧನುಷ್ ಆಚಾರ್ಯ (25) ಅವರು ಪ್ರತಿದೂರು ನೀಡಿದ್ದು, ಶನಿವಾರ ಸಂಜೆ 3.30 ರ ವೇಳೆಗೆ ಧನುಷ್ ಮನೆಯಲ್ಲಿದ್ದಾಗ ಸಾರ್ವಜನಿಕ ರಸ್ತೆಯಲ್ಲಿ ಅಪಘಾತವಾಗಿ ಜನ ಸೇರಿದ್ದು ಕಂಡು ಸ್ಥಳಕ್ಕೆ ತೆರಳಿದ್ದು, ಆಗ ಅಪಘಾತದಲ್ಲಿ ಭಾಗಿಯಾದ ಸ್ಕೂಟರ್ ಹಾಗೂ ಅಟೋ ರಿಕ್ಷಾ ಸವಾರರು ಅಪಘಾತ ಬಗ್ಗೆ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದರು.
ಬಳಿಕ ಸಂಜೆ 4 ಗಂಟೆ ವೇಳೆಗೆ ಧನುಷ್ ತನ್ನ ಗೆಳಯ ಕೀರ್ತನ್ ಜೊತೆ ತುಂಬ್ಯಾ ಜಂಕ್ಷನ್ ಹತ್ತಿರದ ರಾಮಮಂದಿರ ಬಳಿ ಹೋದಾಗ ಅಲ್ಲಿದ್ದ ಇರ್ಷಾದ್ ಅವಾಚ್ಯವಾಗಿ ನಿಂದಿಸಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಧನುಷ್ ಗೆಳಯ ಕೀರ್ತನ್ ಇರ್ಷಾದನನ್ನು ತಡೆದಾಗ, ಶಾಹಿಲ್ ಎಂಬಾತ ಕೀರ್ತನ್ ನನ್ನು ನೆಲಕ್ಕೆ ದೂಡಿ ಹಾಕಿ ಹಲ್ಲೆ ನಡೆಸಿದ್ದಾನೆ ಹಾಗೂ ತಂಟೆಗೆ ಬಂದರೆ ನಿಮ್ಮಬ್ಬರನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಲಾಗಿದೆ.
ಧನುಷ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2021 ಕಲಂ 504, 324, 323, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment