ಬಂಟ್ವಾಳ, ನವೆಂಬರ್ 08, 2021 (ಕರಾವಳಿ ಟೈಮ್ಸ್) : ಸುದೀರ್ಘ ಸಮಯದಿಂದ ಪುಟಾಣಿಗಳಿಗೆ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ರಾಜ್ಯಾದ್ಯಂತ ಸೋಮವಾರದಿಂದ ಪುನರಾರಂಭಗೊಂಡಿದ್ದು, ಬಂಟ್ವಾಳ ತಾಲೂಕಿನ ನಲ್ಕೆಮಾರ್ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದ ಆರಂಭೋತ್ಸವ ಕಾರ್ಯಕ್ರಮವನ್ನು ಶಾಸಕ ಯು ರಾಜೇಶ್ ನಾಯಕ್ ಉದ್ಘಾಟಿಸಿದರು. ಶಾಸಕರ ಜೊತೆ ತಾಲೂಕು ತಹಶೀಲ್ದಾರ್, ತಾ ಪಂ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಅಧ್ಯಕ್ಷರು ಹಾಗೂ ವಿವಿಧ ಗಣ್ಯರು ಚಿಣ್ಣರ ಸಂಭ್ರಮಕ್ಕೆ ಸಾಕ್ಷಿಯಾದರು.
ಅಂಗನವಾಡಿ ಶಾಲೆಯ ಸುತ್ತ ಮಾತೆಯರು ದೀಪ ಬೆಳಗಿಸಿ, ಬಲೂನ್‍ಗಳಿಂದ ಕಮಾನಿನಂತೆ ನಿರ್ಮಾಣ ಮಾಡಿ, ವಿವಿಧ ಬಗೆಯಲ್ಲಿ ಅಲಂಕಾರ ಮಾಡಲಾಗಿತ್ತು,
ಶಾಸಕ ರಾಜೇಶ್ ನಾಕ್ ಅವರು ಅಂಗನವಾಡಿಗೆ ಸೇರ್ಪಡೆಯಾದ ಮಕ್ಕಳ ಕೈಗೆ ಹೂಗಳನ್ನು ನೀಡಿ ಅಂಗನವಾಡಿ ಕೊಠಡಿಗೆ ಕಳುಹಿಸಿದರು. ಕೆಲಹೊತ್ತು ಚಿಣ್ಣರ ಜೊತೆ ಕಳೆದ ಶಾಸಕರು ಬಳಿಕ ಮಾತನಾಡಿ ನಲ್ಕೆಮಾರ್ ಅಂಗನವಾಡಿ ಮಕ್ಕಳಿಗೆ ವಿದ್ಯೆಗೆ ಪೂರಕವಾದ ವಾತಾವರಣವಿದೆ. ಶಾಲಾ ಮೈದಾನವಿದೆ. ದೊಡ್ಡ ಮಕ್ಕಳೊಂದಿಗೆ ಬೆರೆಯಲು ಪ್ರಾಥಮಿಕ ಶಾಲೆಯೂ ಪಕ್ಕದಲ್ಲೆ ಇದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಶಿಕ್ಷಣದ ಆರಂಭ ಅಂಗನವಾಡಿ ಕೇಂದ್ರದಿಂದ ಶುರುವಾಗುತ್ತದೆ. ಶಿಕ್ಷಣದ ದೇಗುಲವಾಗಿರುವ ಅಂಗನವಾಡಿ ಕೇಂದ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಗಬೇಕು. ಆ ನಿಟ್ಟಿನಲ್ಲಿ ವ್ಯವಸ್ಥೆಗಳು ಪ್ರತಿ ಮಗುವಿಗೆ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನಿಲ್ ಕಾಯರ್‍ಮಾರ್, ಸದಸ್ಯರಾದ ಭಾರತಿ ಚೌಟ, ಚಂದ್ರಾವತಿ, ಪ್ರಕಾಶ್, ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಉಪನಿರ್ದೇಶಕ ಪಾಪಬೋವಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ, ಮೇಲ್ವಿಚಾರಕಿ ಗುಣವತಿ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಅಂಗನವಾಡಿ ಕಾರ್ಯಕರ್ತೆ ಭಾರತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನಿಶಾಲತಾ, ಸ್ತ್ರೀ ಶಕ್ತಿ ಸದಸ್ಯರು ಭಾಗವಹಿಸಿದ್ದರು.
0 comments:
Post a Comment