ವರ್ಷದ ಪ್ರತಿಭಟನೆಗೆ ಮಣಿದು ಕೊನೆಗೂ ರೈತರಿಗೆ ಮಂಡಿಯೂರಿದ ಕೇಂದ್ರ ಸರಕಾರ : ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ - Karavali Times ವರ್ಷದ ಪ್ರತಿಭಟನೆಗೆ ಮಣಿದು ಕೊನೆಗೂ ರೈತರಿಗೆ ಮಂಡಿಯೂರಿದ ಕೇಂದ್ರ ಸರಕಾರ : ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ - Karavali Times

728x90

18 November 2021

ವರ್ಷದ ಪ್ರತಿಭಟನೆಗೆ ಮಣಿದು ಕೊನೆಗೂ ರೈತರಿಗೆ ಮಂಡಿಯೂರಿದ ಕೇಂದ್ರ ಸರಕಾರ : ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ

ನವದೆಹಲಿ, ನವೆಂಬರ್ 19, 2021 (ಕರಾವಳಿ ಟೈಮ್ಸ್) : ರೈತರ ವರ್ಷವಿಡೀ ಪ್ರತಿಭಟನೆಗೆ ಕೊನೆಗೂ ಕೇಂದ್ರ ಸರಕಾರ ಮಂಡಿಯೂರಿದೆ. ಗುರುನಾನಕ್ ಜಯಂತಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿದ್ದಾರೆ. 

3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು. ಈ ತಿಂಗಳ ಅಂತ್ಯದಲ್ಲಿ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು ಅದರಲ್ಲಿಯೇ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. 

ರೈತರು ಪ್ರತಿಭಟನೆ ಕೈಬಿಟ್ಟು ತಮ್ಮ ಮನೆಗಳಿಗೆ ತೆರಳುವಂತೆ ಮನವಿ ಮಾಡಿದ ಪ್ರಧಾನಿಗಳು ಈ ಕೃಷಿ ಕಾನೂನುಗಳನ್ನು ಹಿಂಪಡೆಯಲು ನಾವು ಸಾಂವಿಧಾ£ಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮೂರು ಕೃಷಿ ಕಾನೂನುಗಳ ಗುರಿ ರೈತರನ್ನು, ವಿಶೇಷವಾಗಿ ಸಣ್ಣ ರೈತರನ್ನು ಸಬಲೀಕರಣಗೊಳಿಸುವುದಾಗಿತ್ತು. ಮೂರು ಕಾನೂನುಗಳು ರೈತರ ಪ್ರಯೋಜನಕ್ಕಾಗಿವೆಯಾದರೂ ಒಂದು ವರ್ಗದ ರೈತರ ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. 

ಮೋದಿ ರೈತರ ಮನವೊಲಿಸುವಲ್ಲಿ ಸರಕಾರ ವಿಫಲವಾಗಿದ್ದು ಈ ಹಿನ್ನಲೆಯಲ್ಲಿ ಕಾಯ್ದೆ ವಾಪಾಸು ಪಡೆಯಲಾಗುತ್ತಿದೆ ಎಂದು ಘೋಷಿಸಿದ್ದರೂ ಕೆಲವೇ ತಿಂಗಳುಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ದೀರ್ಘ ಸಮಯಗಳಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಕಿವಿ ಕೊಡದ ಕೇಂದ್ರ ಸರಕಾರ ಇದೀಗ ಚುನಾವಣಾ ಹೊಸ್ತಿಲಲ್ಲಿ ಕಾಯ್ದೆಯನ್ನು ಹಿಂಪಡೆದಿರುವುದರ ಹಿಂದೆ ಚುನಾವಣಾ ರಾಜಕೀಯ ಅಡಗಿದೆ ಎಂದು ಸಾರ್ವಜನಿಕ ವಲಯ ವಿಶ್ಲೇಷಿಸುತ್ತಿದೆ. 

2014ರಿಂದ ನಮ್ಮ ಸರ್ಕಾರದಲ್ಲಿ ಕೃಷಿ ಬಜೆಟ್ 5 ಪಟ್ಟು ಏರಿಕೆಯಾಗಿದ್ದು, ವಾರ್ಷಿಕ 1.25 ಲಕ್ಷ ಕೋಟಿ ರೂಪಾಯಿಗಳನ್ನು ಕೃಷಿಗೆ, ರೈತರ ಒಳಿತಿಗೆ ಖರ್ಚು ಮಾಡಿದ್ದೇವೆ. ನನ್ನ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ನಾನು ರೈತರ ಕಷ್ಟಗಳು, ಸವಾಲುಗಳನ್ನು ಬಹಳ ಹತ್ತಿರದಿಂದ  ಕಂಡಿದ್ದೇನೆ. ಕೇಂದ್ರ ಸರಕಾರ ಒಂದು ವರ್ಷದ ಹಿಂದೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. 

ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ-2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ-2020 ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ-2020ನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ ಅದಕ್ಕೆ ಪಂಜಾಬ್, ಹರ್ಯಾಣ ಸೇರಿದಂತೆ ಕೆಲ ಭಾಗಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಲು ತಿದ್ದುಪಡಿ ಮಸೂದೆ ಅತ್ಯಂತ ಉಪಯೋಗಕಾರಿ ಎಂದು ಕೇಂದ್ರ ಸರಕಾರ ರೈತರ ಮನವೊಲಿಕೆಗೆ ಪ್ರಯತ್ನಿಸುತ್ತಿತ್ತು.

ರೈತರೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಗೃಹ ಸಚಿವ ಅಮಿತ್ ಶಾ ಮೊದಲಾದವರು 11 ಸುತ್ತಿನ ಔಪಚಾರಿಕ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ರೈತರ ಪ್ರತಿಭಟನೆ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಲವು ಸೆಲೆಬ್ರಿಟಿಗಳು ರೈತರ ಪರವಹಿಸಿ ಮಾತನಾಡಿದ್ದರು. ಕಳೆದ ಜನವರಿ 26ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಯದಲ್ಲಿ ತೀವ್ರ ಹಿಂಸಾಚಾರ, ಪ್ರತಿಭಟನೆ ಕೂಡ ನಡೆದಿತ್ತು ಎಂಬುದಿಲ್ಲಿ ಉಲ್ಲೇಖನೀಯ. 

ಇದೀಗ ಪ್ರಧಾನಿ ಮೋದಿ ಮೂರೂ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಲು ತೀರ್ಮಾನಿಸಿದ್ದು, ಈ ಮೂಲಕ ವರ್ಷಗಳ ರೈತರ ಹೋರಾಟಕ್ಕೆ ಮಹತ್ತರ ಜಯ ದೊರೆತಂತಾಗಿದೆ. 

ನಾವು ರೈತರಿಗೆ ಸಮಜಂಸ ಬೆಲೆಯಲ್ಲಿ ಬಿತ್ತನೆ ಬೀಜಗಳು ಸಿಗುವಂತೆ ನೋಡಿಕೊಂಡಿದ್ದೆವು. ಇದರ ಜತೆಗೆ ಸಣ್ಣ ನೀರಾವರಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೆವು. 22 ಕೋಟಿ ಮಣ್ಣಿನ ಹೆಲ್ತ್ ಕಾರ್ಡ್ ನೀಡಿದ್ದೇವೆ. ಇದರಿಂದ ಕೃಷಿಯಲ್ಲಿ ಹೆಚ್ಚಿನ ಉತ್ಫಾದನೆ ಸಾಧ್ಯವಾಗಲಿದೆ. ಹೀಗಿದ್ದೂ ನೂತನ ಕೃಷಿ ಕಾಯ್ದೆಯ ಪ್ರಯೋಜನವನ್ನು ಜನರಿಗೆ ಅರ್ಥೈಸಲು ನಾವು ವಿಫಲರಾಗಿದ್ದೇವೆ. ಹೀಗಾಗಿ ನಾವು ಮೂರು ಕೃಷಿ ಕಾಯ್ದೆಯನ್ನು ಹಿಂದೆ ಪಡೆಯಲು ತೀರ್ಮಾನಿಸಿರುವುದಾಗಿ ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ವರ್ಷದ ಪ್ರತಿಭಟನೆಗೆ ಮಣಿದು ಕೊನೆಗೂ ರೈತರಿಗೆ ಮಂಡಿಯೂರಿದ ಕೇಂದ್ರ ಸರಕಾರ : ಮೂರೂ ಕೃಷಿ ತಿದ್ದುಪಡಿ ಕಾಯ್ದೆಗಳು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ Rating: 5 Reviewed By: karavali Times
Scroll to Top