ಬೆಂಗಳೂರು, ಅಕ್ಟೋಬರ್ 29, 2021 ( ಕರಾವಳಿ ಟೈಮ್ಸ್) : ಶುಕ್ರವಾರ ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಡಾ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ (46) ಅವರು ಚಿಕತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಶುಕ್ರವಾರ ನಸುಕಿನ ಜಾವ ಎಂದಿನಂತೆ ಜಿಮ್‍ನಲ್ಲಿ ದೇಹ ಕಸರತ್ತು ನಡೆಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಹಠಾತ್ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತು. ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪನೀತ್ ಅವರ ಹಠಾತ್ ನಿಧನದ ಸುದ್ದಿ ತಿಳಿದು ಇದೀಗ ಕುಟುಂಬಿಕರು, ಅಭಿಮಾನಿಗಳು ಸೇರಿದಂತೆ ಇಡೀ ಕನ್ನಡ ನಾಡು ತೀವ್ರ ಆಘಾತಗೊಂಡಿದ್ದು, ಶೋಕಸಾಗರದಲ್ಲಿ ಮುಳುಗಿಸಿದೆ. ಪುನೀತ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಹಲವು ಗಣ್ಯರು ಅಸಂಖ್ಯಾತ ಅಭಿಮಾನಿಗಳು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾ£ಗಳು ತಂಡೋಪತಂಡವಾಗಿ ಮನೆಯತ್ತ ಲಗ್ಗೆಯಿಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪುನೀತ್ ಮನೆಗೆ ತೆರಳುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವರ ನಿವಾಸಕ್ಕೆ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಟ ಪುನೀತ್ ರಾಜ್ ಕುಮಾರ್ ಅವರು ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಬಂದಿದ್ದಾರೆ, ಇಂದು ಬೆಳಗ್ಗೆ 11.30ರ ಹೊತ್ತಿಗೆ ಅವರು ಆಸ್ಪತ್ರೆಗೆ ಬರುವಾಗಲೇ ಗಂಭೀರವಾಗಿದ್ದರು. ಅದಕ್ಕೆ ಮೊದಲು ಎದೆನೋವು ಕಾಣಿಸಿಕೊಂಡು ಬೇರೆ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಂಡು ಇಲ್ಲಿಗೆ ಬಂದರು. ಐಸಿಯುನಲ್ಲಿ ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಮ್ಮಿಂದ ಬದುಕಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ತಜ್ಞ ಡಾ ರಂಗನಾಥ್ ನಾಯಕ್ ತಿಳಿಸಿದ್ದಾರೆ.
0 comments:
Post a Comment