ರಾಜಕೀಯದಲ್ಲಿ ಯಾರನ್ನೂ ಶತ್ರುಗಳಾಗಿ ಕಾಣದೆ, ಪ್ರಚಾರ ಬಯಸದೆ ಅಭಿವೃದ್ದಿ ಕೈಗೊಂಡವರು ಆಸ್ಕರ್ ಫೆರ್ನಾಂಡಿಸ್ : ರಮಾನಾಥ ರೈ ಬಣ್ಣನೆ - Karavali Times ರಾಜಕೀಯದಲ್ಲಿ ಯಾರನ್ನೂ ಶತ್ರುಗಳಾಗಿ ಕಾಣದೆ, ಪ್ರಚಾರ ಬಯಸದೆ ಅಭಿವೃದ್ದಿ ಕೈಗೊಂಡವರು ಆಸ್ಕರ್ ಫೆರ್ನಾಂಡಿಸ್ : ರಮಾನಾಥ ರೈ ಬಣ್ಣನೆ - Karavali Times

728x90

21 October 2021

ರಾಜಕೀಯದಲ್ಲಿ ಯಾರನ್ನೂ ಶತ್ರುಗಳಾಗಿ ಕಾಣದೆ, ಪ್ರಚಾರ ಬಯಸದೆ ಅಭಿವೃದ್ದಿ ಕೈಗೊಂಡವರು ಆಸ್ಕರ್ ಫೆರ್ನಾಂಡಿಸ್ : ರಮಾನಾಥ ರೈ ಬಣ್ಣನೆ

ಉಡುಪಿ, ಅಕ್ಟೋಬರ್ 21, 2021 (ಕರಾವಳಿ ಟೈಮ್ಸ್) : ಅವಿಭಜಿತ ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮಾಡಿದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ. ರಾಜಕೀಯ ಎದುರಾಳಿಗಳನ್ನು ವೈರಿಗಳಂತೆ ಕಾಣದೆ, ಅವರೆಲ್ಲರನ್ನು ಪ್ರೀತಿಸಿದವರು ಆಸ್ಕರಣ್ಣ, ದೇಶದಲ್ಲಿ ಹಲವಾರು ನಾಯಕರನ್ನು ಸಾರ್ವಜನಿಕ ಜೀವನದಲ್ಲಿ ಬೆಳೆಸಿದವರು ಆಸ್ಕರ್ ಫೆರ್ನಾಂಡಿಸ್. ನಮ್ಮೆಲ್ಲರ ಸಾರ್ವಜನಿಕ ಬದುಕಿನಲ್ಲಿ ಆಸ್ಕರ್ ಫೆರ್ನಾಂಡಿಸ್ ತಾಯಿಗೆ ಸಮಾನರು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಬಣ್ಣಿಸಿದರು .

ದಿವಂಗತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ನಡೆದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಸ್ಕರ್ ಫೆರ್ನಾಂಡಿಸ್ ಧರ್ಮ ಮತ್ತು ರಾಜಕೀಯ ಮೀರಿ ಬೆಳೆದವರು. ನೆಹರು ಕುಟುಂಬಕ್ಕೆ ಹತ್ತಿರವಾಗಿದ್ದ ಅವರು ಜನರ ಪ್ರೀತಿ ವಿಶ್ವಾಸಕ್ಕೆ ಕಾರಣಕರ್ತರಾಗಿದ್ದರು. ಅವರಲ್ಲಿದ್ದ ಕಠಿಣ ಶ್ರಮ, ನಂಬಿಕೆ, ವಿಶ್ವಾಸ ರಾಷ್ಟ್ರದ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಲು ಕಾರಣ. ಅವಿಭಜಿತ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ, ಯಾವುದೇ ಪ್ರಚಾರವನ್ನು ಬಯಸದೆ ಬೆಳೆದ ರಾಜಕಾರಣಿಯಾಗಿದ್ದರು. ದೇಶದಲ್ಲಿ ಕಾರ್ಮಿಕರಿಗೆ ವಿವಿಧ ಸವಲತ್ತುಗಳ ಸಹಿತ 8 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಾರಣಕರ್ತರು. ದೇಶದಲ್ಲಿ ಹಲವಾರು ಅಭಿವೃದ್ಧಿಗೆ ಕಾರಣಕರ್ತರಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರ ವ್ಯಕ್ತಿತ್ವ ಶಾಶ್ವತ ಎಂದು ಕೊಂಡಾಡಿದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ದೀರ್ಘಾವಧಿ ರಾಜಕೀಯ ನಾಯಕನಾಗಿ ಪ್ರಜ್ವಲಿಸಿದವರು ಆಸ್ಕರ್ ಫೆರ್ನಾಂಡಿಸ್. ದೆಹಲಿಯ ತನ್ನ ಕಚೇರಿಯಲ್ಲಿ ತಡರಾತ್ರಿಯವರೆಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಆಸ್ಕರ್ ಸಮಸ್ತ ಜನಪ್ರತಿನಿಧಿಗಳಿಗೆ ಪ್ರೇರಣೆ. ಆಸ್ಕರ್ ಫೆರ್ನಾಂಡಿಸ್ ಅವರ ಮಾನವೀಯ ನೆಲೆ ಅವರ ಮೇಲೆ ನನಗೆ ಪ್ರೇರಣೆಯಾಗಲು ಕಾರಣ. ನನ್ನ ವೈಯಕ್ತಿಕ ಜೀವನದಲ್ಲಿ ತೀರಾ ಕಷ್ಟದಲ್ಲಿದ್ದಾಗ ಆಸ್ಕರ್ ಫೆರ್ನಾಂಡಿಸ್ ನನಗೆ ಸಾಂತ್ವನ ಹೇಳಿದ್ದು ಮರೆಯಲಾಗದು. ಉಡುಪಿ ಜಿಲ್ಲೆ ಅಭಿವೃದ್ಧಿಗೆ ಮತ್ತು ರಾಜಕೀಯಕ್ಕೆ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ದಿವಂಗತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಅಧ್ಯಕ್ಷ ಮತ್ತು ಉದ್ಯಮಿ ರೊನಾಲ್ಡ್ ಮನೋಹರ್ ಕರ್ಕಡ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಆಸ್ಕರ್ ಧರ್ಮ ಮತ್ತು ಪಕ್ಷವನ್ನು ಮೀರಿ ಬೆಳೆದವರು. ತನ್ನ ಪಕ್ಷದವರನ್ನು ಮಾತ್ರವಲ್ಲದೆ ಇತರ ಪಕ್ಷದವರನ್ನು ಗೌರವಿಸುತ್ತಿದ್ದ ಆಸ್ಕರ್ ಪುಸ್ತಕ ಕಾಲದ ರಾಜಕಾರಣಿಗಳಿಗೆ ಮಾದರಿ. ಉದ್ಯಾವರದಂತಹ ಸಣ್ಣ ಗ್ರಾಮದಲ್ಲಿ ಬೆಳೆದು ದೆಹಲಿಯವರೆಗೂ ಪ್ರಭಾವಿ ರಾಜಕಾರಣಿಯಾಗಿ ಬೆಳೆದದ್ದು ಅವಿಸ್ಮರಣೀಯ. ತಾನು ಮಾಡಿದ ಹಲವು ಅತ್ಯಂತ ಪ್ರಭಾವಿ ಕೆಲಸಗಳನ್ನು ಯಾವುದೇ ಪ್ರಚಾರ ಬಯಸದೆ ಮಾಡಿದವರು. ಹಲವು ಯುವಕರಿಗೆ ಉದ್ಯೋಗದ ವ್ಯವಸ್ಥೆ, ಜತೆಗೆ ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ಆಸ್ಕರ್ ಆಸರೆಯಾಗಿದ್ದರು ಎಂದರು. 

ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟ್ಯಾನಿ ಬಿ ಲೋಬೊ, ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಾಗೇಶ್ ಕುಮಾರ್ ಉದ್ಯಾವರ, ಎಂ ಎ ಗಪೂರ್, ಬಿಪಿನ್ ರಾವ್, ಆಸ್ಕರ್ ಫೆರ್ನಾಂಡಿಸ್ ಅವರ ಸೊಸೆ ಫ್ರೆಜಿಲ್ ಫೆರ್ನಾಂಡಿಸ್ ಮೊದಲಾದವರು ಇದೇ ವೇಳೆ ನುಡಿನಮನ ಸಲ್ಲಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿ ಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಪೆರ್Çರೇಟರ್ ನವೀನ್ ಡಿಸೋಜಾ, ವಿಲಿಯಂ ಮಾರ್ಟಿಸ್, ಪ್ರಮುಖರಾದ ದಿನೇಶ್ ಪುತ್ರನ್, ಡೆರಿಕ್ ಡಿ’ಸೋಜ, ನವೀನ್ ಚಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಮೇರಿ ಡಿ’ಸೋಜ, ಹರೀಶ್ ಶೆಟ್ಟಿ, ರೋಶನಿ ಒಲಿವೆರಾ, ಅನಿತಾ ಡಿ’ಸೋಜಾ, ದೀಪಕ್ ಹೆಗ್ಡೆ, ಮೇರಿ ಡಿ’ಸೋಜಾ, ನೇರಿ ಕರ್ನೇಲಿಯೊ, ಅರವಿಂದ್ ಫೆರ್ನಾಂಡಿಸ್, ರೋಯ್ಡನ್ ರೊಡ್ರಿಗಸ್ ಮೊದಲಾದವರು ಭಾಗವಹಿಸಿದ್ದರು. 

ಇದಕ್ಕೂ ಮೊದಲು ಪವಿತ್ರ ಬಲಿಪೂಜೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಲಿಪೂಜೆಯ ನೇತೃತ್ವವನ್ನು ನಿವೃತ್ತ ಧರ್ಮಗುರು ಕ್ಸೇವಿಯರ್ ಪಿಂಟೊ ನೆರವೇರಿಸಿದರು. ಮಂಗಳೂರು ದಕ್ಷಿಣದ  ಮಾಜಿ ಶಾಸಕ ಜೆ ಆರ್ ಲೋಬೊ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ದಿವಂಗತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಸಂಘಟಕ ಮೊಹಮ್ಮದ್ ಶ್ರೀಶ್ ಸ್ವಾಗತಿಸಿ, ಸಂಚಾಲಕ ಸ್ಟೀವನ್ ಕುಲಾಸೊ ಪ್ರಸ್ತಾವನೆಗೈದರು. ಶಿಕ್ಷಕ ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ರಾಜಕೀಯದಲ್ಲಿ ಯಾರನ್ನೂ ಶತ್ರುಗಳಾಗಿ ಕಾಣದೆ, ಪ್ರಚಾರ ಬಯಸದೆ ಅಭಿವೃದ್ದಿ ಕೈಗೊಂಡವರು ಆಸ್ಕರ್ ಫೆರ್ನಾಂಡಿಸ್ : ರಮಾನಾಥ ರೈ ಬಣ್ಣನೆ Rating: 5 Reviewed By: karavali Times
Scroll to Top