ಬಂಟ್ವಾಳ, ಅಕ್ಟೋಬರ್ 01, 2021 (ಕರಾವಳಿ ಟೈಮ್ಸ್) : ಕರ್ನಾಟಕ ಪತ್ರಕರ್ತ ಸಂಘ (ಕೆಜೆಯು) ಇದರ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಫಾರೂಕ್ ಗೂಡಿನಬಳಿ (42) ಅನಾರೋಗ್ಯದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿಯಾಗಿರುವ ಇವರು ಕಳೆದ ಕೆಲ ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಇವರು ಗುರುವಾರದಿಂದ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿ ಶುಕ್ರವಾರ ಸಂಜೆ ನಿಧನರಾದರು.
ವಿಜಯ ಕರ್ನಾಟಕ, ಸಂಜೆವಾಣಿ, ಜಯ ಕಿರಣ, ಉಷಾ ಕಿರಣ, ಕರಾವಳಿ ಮಾರುತ ಮೊದಲಾದ ಪತ್ರಿಕೆಗಳಿಗೆ ಬಂಟ್ವಾಳ ವರದಿಗಾರನಾಗಿ, ವಂಶ ಪಾಕ್ಷಿಕ ಪತ್ರಿಕೆಯ ಸಂಪಾದಕ ಮಂಡಳಿಯಲ್ಲೂ ಕಾರ್ಯನಿರ್ವಹಿಸಿದ್ದರು.
ಗ್ರಾಪಂ. ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಫಾರೂಕ್ ಸಾಮಾಜಿಕವಾಗಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಪುತ್ರಿ, ತಾಯಿ ಸಹೋದರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತ್ರಕರ್ತ ಫಾರೂಕ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಸಹಿತ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment