ದುಬೈ, ಅಕ್ಟೋಬರ್ 30, 2021 (ಕರಾವಳಿ ಟೈಮ್ಸ್) : ನಾಯಕ ಬಾಬರ್ ಅಝಂ ಅವರ ಅರ್ಧಶತಕದ ಹೊರತಾಗಿಯೂ ಕೊನೆ ಕ್ಷಣದಲ್ಲಿ ರೋಚಕ ಹೋರಾಟದೊಂದಿಗೆ ಜಯದ ನಿರೀಕ್ಷೆಯಲ್ಲಿದ್ದ ಅಫಘಾನಿಸ್ತಾನಕ್ಕೆ ಆಸಿಫ್ ಆಲಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ನಿರಾಸೆ ಮೂಡಿಸಿದರು. ಈ ಮೂಲಕ ಪಾಕಿಸ್ತಾನ ತಂಡ ಅಫಘಾನ್ ತಂಡವನ್ನು ರೋಮಾಂಚಕ 5 ವಿಕೆಟ್ ಗಳಿಂದ ಪರಾಭವಗೊಳಿಸಿ ಟಿ-20 ವಿಶ್ವಕಪ್-2021 ರ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ದುಬೈ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫಘಾನ್ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆರಂಭದಲ್ಲಿ ವಿಕೆಟ್ ಕಳೆದಕೊಂಡು ಕುಸಿತ ಅನುಭವಿಸಿದ ಅಫಘಾನ್ ಬಳಿಕ ಚೇತರಿಸಿಕೊಂಡು ಮುಹಮ್ಮದ್ ನೆಬಿ (ಅಜೇಯ 35 ರನ್) ಹಾಗೂ ಗುಲ್ಬಾದಿನ್ ನೈಬ್ (ಅಜೇಯ 35 ರನ್) ಅವರ ಹೋರಾಟದ ಫಲದಿಂದ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
148 ರನ್ ಗಳ ಸಾಧಾರಣ ಮೊತ್ತದ ಗುರಿ ಪಡೆದ ಪಾಕಿಸ್ತಾನದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ ಕೇವಲ 8 ರನ್ ಗಳಿಸಿ ತಂಡದ ಮೊತ್ತ 12 ರನ್ ಆಗುವಷ್ಟರಲ್ಲಿ ನಿರ್ಗಮಿಸಿದರು.
ಬಾಬರ್ ಅಝಂ ಹಾಗೂ ಫಖರ್ ಝಮಾನ್ ಎರಡನೇ ವಿಕೆಟ್‌ಗೆ 63 ರನ್ ಜೊತೆಯಾಟ ನೀಡಿದರು. ಫಖರ್ ಝಮಾನ್ 30 ರನ್ ಗಳಿಸಿ ಔಟಾದರು. ಹೋರಾಟ ಮುಂದುವರಿಸಿದ ಬಾಬರ್ ಅಝಂ ಮೊಹಮ್ಮದ್ ಹಫೀಜ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಮೊಹಮ್ಮದ್ ಹಫೀಝ್ ಅವರು ರಶೀದ್ ಖಾನ್ ಸ್ಪಿನ್ ಮೋಡಿಗೆ ಬಲಿಯಾದರು.
ಹಫೀಜ್ ವಿಕೆಟ್ ಕಬಳಿಸುವ ಮೂಲಕ ರಶೀದ್ ಖಾನ್ ಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿಗೆ ರಶೀದ್ ಖಾನ್ ಸೇರಿಕೊಂಡಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಶಕೀಬ್ ಅಲ್ ಹಸನ್ 117 ವಿಕೆಟ್, ಲಸಿತ್ ಮಾಲಿಂಗ 107 ವಿಕೆಟ್, ಟಿಮ್ ಸೌಥಿ 100 ವಿಕೆಟ್ ಬಳಿಕದ ಸಾಲಿಗೆ ರಶೀದ್ ಖಾನ್ ಸೇರ್ಪಡೆಯಾದರು.
ರಶೀದ್ ಖಾನ್ ಟಿ-20 ಕ್ರಿಕೆಟ್‌ನಲ್ಲಿ 53 ಪಂದ್ಯಗಳಿಂದ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಏಕದಿನದಲ್ಲಿ ಅವರು 44 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.
ಬಾಬರ್ ಅಝಂಗೆ ಶೋಯೆಬ್ ಮಲಿಕ್ ಉತ್ತಮ ಸಾಥ್ ನೀಡಿದರು. ಬಾಬರ್ ಅಝಂ ಅರ್ಧ ಶತಕ ಪೂರ್ತಿಗೊಳಿಸಿ (51 ರನ್) ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಬಾಬರ್ ವಿಕೆಟ್ ಪತನದ ಬಳಿಕ ಪಾಕಿಸ್ತಾನ ಗೆಲುವಿಗೆ 18 ಎಸೆತದಲ್ಲಿ 26 ರನ್ ಅವಶ್ಯಕತೆ ಇತ್ತು. ಆಫ್ಘಾನಿಸ್ತಾನ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವಾಗಲೇ 19 ರನ್ ಸಿಡಿಸಿದ ಶೋಯೆಬ್ ಮಲಿಕ್ ವಿಕೆಟ್ ಕೈಚೆಲ್ಲಿದರು.
ಪಾಕಿಸ್ತಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 24 ರನ್ ಬೇಕಿತ್ತು. ಈ ಹಂತದಲ್ಲಿ ಒಂದೇ ಓವರಿನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸಿಫ್ ಆಲಿ ಪಂದ್ಯವನ್ನು ಸಂಪೂರ್ಣವಾಗಿ ಅಫಘಾನ್ ಕೈಯಿಂದ ಕಿತ್ತುಕೊಂಡರು. 6 ಎಸೆತ ಬಾಕಿ ಇರುವಂತೆ ಪಾಕಿಸ್ತಾನ ಗೆಲುವಿನ ದಡ ಸೇರಿತು.
0 comments:
Post a Comment