ನ್ಯೂಜಿಲೆಂಡ್ ಸರ್ವಾಂಗೀಣ ಪ್ರದರ್ಶನಕ್ಕೆ ತಲೆ ಬಾಗಿದ ಕೊಹ್ಲಿ ಪಟಾಲಂ : ಇತರ ತಂಡಗಳ ಪ್ರದರ್ಶನ ಮೇಲೆ ಭಾರತದ ಸೆಮೀಸ್ ಆಸೆ ಅವಲಂಬಿತ  - Karavali Times ನ್ಯೂಜಿಲೆಂಡ್ ಸರ್ವಾಂಗೀಣ ಪ್ರದರ್ಶನಕ್ಕೆ ತಲೆ ಬಾಗಿದ ಕೊಹ್ಲಿ ಪಟಾಲಂ : ಇತರ ತಂಡಗಳ ಪ್ರದರ್ಶನ ಮೇಲೆ ಭಾರತದ ಸೆಮೀಸ್ ಆಸೆ ಅವಲಂಬಿತ  - Karavali Times

728x90

31 October 2021

ನ್ಯೂಜಿಲೆಂಡ್ ಸರ್ವಾಂಗೀಣ ಪ್ರದರ್ಶನಕ್ಕೆ ತಲೆ ಬಾಗಿದ ಕೊಹ್ಲಿ ಪಟಾಲಂ : ಇತರ ತಂಡಗಳ ಪ್ರದರ್ಶನ ಮೇಲೆ ಭಾರತದ ಸೆಮೀಸ್ ಆಸೆ ಅವಲಂಬಿತ 

 ದುಬೈ, ಅಕ್ಟೋಬರ್ 31, 2021 (ಕರಾವಳಿ ಟೈಮ್ಸ್) : ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಾಡು ಇಲ್ಲವೇ ಮಡಿ ಮಹತ್ವ ಪಡೆದಿದ್ದ  ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಟೀಂ ಇಂಡಿಯಾ ಮುಗ್ಗರಿಸಿ ಬಿದ್ದಿದೆ. ಅಲ್ಪ ಮೊತ್ತಕ್ಕೆ ಕುಸಿದ ಟೀಂ ಇಂಡಿಯಾ ಕಿವೀಸ್ ಗೆ 8 ವಿಕೆಟ್ ಅಂತರದಲ್ಲಿ ಸುಲಭವಾಗಿ ಶರಣಾಗಿದೆ. ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿರುವ ಭಾರತ ಟೂರ್ನಿಯಲ್ಲಿ ಉಳಿಯಬೇಕಾದರೆ ಇತರ ತಂಡಗಳ ಫಲಿತಾಂಶ ಅವಲಂಬಿಸಬೇಕಾಗಿದೆ. 

ಕಿವೀಸ್ ಇಂದಿನ ಜಯದೊಂದಿಗೆ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಂಡಿದೆ.  ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಭರ್ಜರಿಯಾಗಿ ಜಯಗಳಿಸಿದರೂ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ರನ್ ರೇಟ್ ಜಾಸ್ತಿಯಿದೆ. ಹೀಗಾಗಿ ಭಾರತದ ಸೆಮಿಫೈನಲ್ ಆಸೆ ಬಹುತೇಕ ಭಗ್ನಗೊಂಡಂತೆಯೇ. ಇನ್ನು ಏನಾದರೂ ಪವಾಡ ನಡೆದರೆ ಮಾತ್ರ ಭಾರತ ಸೆಮಿಫೈನಲ್ ಪ್ರವೇಶಿಸಬಹುದಷ್ಟೇ. ಭಾ

ಭಾರತ ನೀಡಿದ 111 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 14.3 ಓವರ್‌ಗಳಲ್ಲಿ  111 ರನ್ ಗಳಿಸಿ ಸುಲಭ ಜಯಗಳಿಸಿದೆ. ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ 49 ರನ್ (35 ಎಸೆತ, 1 ಬೌಂಡರಿ) ಬಾರಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿ ವಿಕೆಟ್ ಒಪ್ಪಿಸಿದರು. ನಂತರ ಕೇನ್ ವಿಲಿಯಮ್ಸನ್  33 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. 

 ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಭಾರತೀಯ ಬ್ಯಾಟ್ಸ್‌ಮ್ಯಾನ್‌ಗಳು ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮತ್ತೆ ಮರುಕಳಿಸಿದರು. ಆರಂಭಿಕರಾಗಿ ಅವಕಾಶ ಪಡೆದ ಇಶಾನ್ ಕಿಶಾನ್ 4 ರನ್ (8 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರೋಹಿತ್ ಶರ್ಮಾ, ರಾಹುಲ್ ಜೊತೆಗೂಡಿ ಇನ್ನಿಂಗ್ಸ್ ಬೆಳೆಸುವ ಸೂಚನೆ ನೀಡಿದರೂ ಕೂಡ ಅದು ನ್ಯೂಜಿಲೆಂಡ್ ಬೌಲರ್‍ ಗಳ ಮುಂದೆ ನಡೆಯಲಿಲ್ಲ. ಕೆ.ಎಲ್ ರಾಹುಲ್ 18 ರನ್ (16 ಎಸೆತ, 3 ಬೌಂಡರಿ) ಮತ್ತು ರೋಹಿತ್ ಶರ್ಮಾ 14 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಇಬ್ಬರು ಬಹು ಬೇಗನೆ ವಿಕೆಟ್ ಒಪ್ಪಿಸಿದರು.  7.4 ಓವರ್‌ಗಳು ಆಗುತ್ತಿದ್ದಂತೆ ಭಾರತದ 3 ಮಂದಿ ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಬ್ಯಾಟಿಂಗ್‍ಗೆ ಬಂದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗುತ್ತಾರೆ ಎನ್ನುವಾಗಲೇ ಕೇವಲ 9 ರನ್ (17 ಎಸೆತ) ಗಳಿಸಿ ಔಟಾದರು. 

ನಂತರ ಹಾರ್ದಿಕ್ ಪಾಂಡ್ಯ 23 ರನ್ (24 ಎಸೆತ, 1 ಬೌಂಡರಿ) ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಕಡೆಯ ಎಸೆತದವರೆಗೆ ನಿಂತು ಆಡಿದ ರವೀಂದ್ರ ಜಡೇಜಾ 26 ರನ್ (19 ಎಸೆತ, 2 ಬೌಂಡರಿ, 1 ಸಿಕ್ಸ್) ನೆರವಿನಿಂದ ಭಾರತ ತಂಡ 20 ಓವರ್‍ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. 

 ನ್ಯೂಜಿಲೆಂಡ್ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತು ಮಿಂಚಿದರೆ, ಇಶ್ ಸೋಧಿ 2 ವಿಕೆಟ್ ಮತ್ತು ಆಡಮ್ ಮಿಲ್ನೆ ಮತ್ತು ಟಿಮ್ ಸೌಥಿ ತಲಾ 1 ವಿಕೆಟ್ ಪಡೆದರು.

 ಗ್ರೂಪ್ 2 ರಲ್ಲಿ ಭಾರತ ತಂಡ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದು, ಆಡಿರುವ ಮೂರು ಪಂದ್ಯಗಳಲ್ಲೂ ಜಯ ಗಳಿಸಿ 6 ಅಂಕಗಳಿಸಿರುವ ಪಾಕಿಸ್ತಾನ ಆಗ್ರಸ್ಥಾನಿಯಾಗಿ ಸೆಮಿಫೈನಲ್ ಗೇರಿದೆ. ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ಮತ್ತು ಆಡಿರುವ 2 ಪಂದ್ಯದಲ್ಲಿ 1 ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ನಡುವೆ ಸೆಮೀಸ್ ಸೆಣಸಾಟಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ.

  • Blogger Comments
  • Facebook Comments

0 comments:

Post a Comment

Item Reviewed: ನ್ಯೂಜಿಲೆಂಡ್ ಸರ್ವಾಂಗೀಣ ಪ್ರದರ್ಶನಕ್ಕೆ ತಲೆ ಬಾಗಿದ ಕೊಹ್ಲಿ ಪಟಾಲಂ : ಇತರ ತಂಡಗಳ ಪ್ರದರ್ಶನ ಮೇಲೆ ಭಾರತದ ಸೆಮೀಸ್ ಆಸೆ ಅವಲಂಬಿತ  Rating: 5 Reviewed By: karavali Times
Scroll to Top