ಚೆನ್ನೈ, ಅಕ್ಟೋಬರ್ 12, 2021 (ಕರಾವಳಿ ಟೈಮ್ಸ್) : ತಮಿಳುನಾಡು ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಾರ್ಡ್ ಬಿಜೆಪಿ ಅಭ್ಯರ್ಥಿ ಡಿ ಕಾರ್ತಿಕ್ ಎಂಬವರು ತನ್ನ ಮನೆಯಲ್ಲಿ ಐದು ಮಂದಿ ಮತದಾರರಿದ್ದ ಹೊರತಾಗಿಯೂ ತಾನು ಏಕಮಾತ್ರ ಮತ ಪಡೆದು ವಿಲಕ್ಷಣ ರಾಜಕೀಯ ವಿದ್ಯಾಮಾನಕ್ಕೆ ಸಾಕ್ಷಿಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಿ ಕಾರ್ತಿಕ್ ಅವರು ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮತ ಎಣಿಕೆ ವೇಳೆ ಅವರು ಸಿಂಗಲ್ ಮತ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಘಟಾನುಘಟಿ ನಾಯಕರ ಫೋಟೋಗಳನ್ನು ಕಾರ್ತಿಕ್ ಅವರು ತಮ್ಮ ಚುನಾವಣಾ ಪ್ರಚಾರದ ಪೋಸ್ಟರ್ ಗಳಲ್ಲಿ ಹಾಕಿ ಭಾರೀ ಪ್ರಚಾರ ಕೈಗೊಂಡಿದ್ದರು. ಆದರೂ ಏಕಮಾತ್ರ ಮತ ಪಡೆಯುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.
ತಮಿಳ್ನಾಡಿನಲ್ಲಿ ಅಕ್ಟೋಬರ್ 6 ಹಾಗೂ 9 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಚುನಾವಣೆಯಲಿ ಒಟ್ಟು 27,003 ಸ್ಥಾನಗಳಿಗೆ 79,433 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಸಿಂಗಲ್ ವೋಟ್ ಪಡೆದ ಅಭ್ಯರ್ಥಿ ಬಗ್ಗೆ ಬರಹಗಾರ್ತಿ ಮತ್ತು ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವಿಟ್ವರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ಸಿನ ಅಶೋಕ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಜೆಪಿ ಅಭ್ಯರ್ಥಿಯು ಕೊಯಮತ್ತೂರಿನಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಮನೆಯಲ್ಲಿ ಐದು ಸದಸ್ಯರಿದ್ದು, ಒಂದೇ ಒಂದು ಮತವನ್ನು ಪಡೆದರು. ಈ ರೀತಿ ತಮಿಳುನಾಡು ಬಿಜೆಪಿಯನ್ನು ನಿಭಾಯಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
0 comments:
Post a Comment