ಶಾರ್ಜಾ, ಅಕ್ಟೋಬರ್ 27, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಕೂಟದಲ್ಲಿ ಮಂಗಳವಾರ ರಾತ್ರಿ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಪಾಕಿಸ್ತಾನ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.
ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಝಂ ನ್ಯೂಜಿಲ್ಯಾಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಪಾಕ್ ಬೌಲರ್ ಗಳ ಮೊನಚಿನ ದಾಳಿಯ ಮುಂದೆ ಮಂಕಾದ ಕಿವೀಸ್ ದಾಂಡಿಗರು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಸಾಧಾರಣ ಮೊತ್ತ ಪೇರಿಸಿದರು.
ಮಾರ್ಟಿನ್ ಗಪ್ಟಿಲ್ 17, ಡ್ರೈಲ್ ಮಿಚೆಲ್ 27, ನಾಯಕ ಕೇನ್ ವಿಲಿಯಮ್ಸನ್ 25, ಡೇವೊನ್ ಕೊನ್ವೆ 27, ಗ್ಲೆನ್ ಫಿಲಿಪ್ಸ್ 13 ರನ್ ಸಿಡಿಸಿದರು.
ಸುಲಭ ಗುರಿ ಪಡೆದ ಪಾಕಿಸ್ತಾನ ಕೂಡಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಬಾಬರ್ ಅಜಮ್ 9 ರನ್ ಸಿಡಿಸಿ ಔಟಾದರು. ಬಳಿಕ ಮೊಹಮ್ಮದ್ ರಿಜ್ವಾನ್ ಹಾಗೂ ಫಕಾರ್ ಜಮಾನ್ ಜೋಡಿಯ ತಾಳ್ಮೆಯ ಆಟದಿಂದ ಪಾಕಿಸ್ತಾನ ಚೇತರಿಸಿಕೊಂಡಿತು. ಫಕರ್ ಜಮಾನ್ 11 ರನ್ ಸಿಡಿಸಿ ಔಟಾಗುವ ಮೂಲಕ ಪಾಕ್ 47 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಹಫೀಜ್ 11 ರನ್ ಸಿಡಿಸಿ ನಿರ್ಗಮಿಸಿದರೆ, ರಿಜ್ವಾನ್ 33 ರನ್ ಸಿಡಿಸಿ ಔಟಾದರು. 69 ರನ್‌ಗೆ 4 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡ ಸಂಕಷ್ಟಕ್ಕೆ ಸಿಲುಕಿತು.
ಗುರಿ ಸುಲಭವಾಗಿದ್ದರೂ ನ್ಯೂಜಿಲೆಂಡ್ ದಾಳಿಗೆ ವಿಕೆಟ್ ಉಳಿಸಿಕೊಳ್ಳುವ ಸವಾಲು ಪಾಕಿಸ್ತಾನಕ್ಕೆ ಎದುರಾಯಿತು. ಕುಸಿದ ತಂಡಕ್ಕೆ ಶೋಯೆಬ್ ಮಲಿಕ್ ಆಸರೆಯಾದರು. ಆದರೆ ಇಮಾದ್ ವಾಸಿಮ್ 11 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಜೊತೆಗೂಡಿದ ಶೋಯೆಬ್ ಮಲಿಕ್ ಹಾಗೂ ಆಸಿಫ್ ಆಲಿ ಹೋರಾಟದಿಂದ ಪಾಕಿಸ್ತಾನ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮಲಿಕ್ ಹಾಗೂ ಆಸಿಫ್ ದಿಟ್ಟ ಬ್ಯಾಟಿಂಗಿನಿಂದಾಗಿ ಪಾಕಿಸ್ತಾನ ಸುಲಭವಾಗಿ ದಡ ಸೇರಿತು.
ಪಾಕ್ ತಂಡ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ.
ಟಿ20 ವಿಶ್ವಕಪ್ ಟೂರ್ನಿಯ 2ನೇ ಗುಂಪಿನಲ್ಲಿ ಪಾಕಿಸ್ತಾನ ಮತ್ತೆ ಅಗ್ರಸ್ಥಾನಕ್ಕೇರಿದೆ. ಎರಡು ಪಂದ್ಯದಿಂದ 2 ಗೆಲುವು ದಾಖಲಿಸಿರುವ ಪಾಕಿಸ್ತಾನ 4 ಅಂಕಗೊಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆಪ್ಘಾನಿಸ್ತಾನ ಆಡಿದ 1 ಪಂದ್ಯದಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ನಮಿಬಿಯಾ ಹಾಗೂ ನ್ಯೂಜಿಲೆಂಡ್ 3 ಮತ್ತು ನಾಲ್ಕನೇ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ 5 ಹಾಗೂ ಸ್ಕಾಟ್‌ಲೆಂಡ್ 6ನೇ ಸ್ಥಾನದಲ್ಲಿದೆ.
0 comments:
Post a Comment