ದುಬೈ, ಅಕ್ಟೋಬರ್ 24, 2021) : ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಮೊದಲ ದಿನದ ಎರಡನೇ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್ 6 ವಿಕೆಟ್ ಭರ್ಜರಿ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಶನಿವಾರ ರಾತ್ರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ ಕೇವಲ 56 ರನ್ ಗಳ ಗುರಿ ಪಡೆದ ಇಂಗ್ಲಂಡ್ 8.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ಮೊದಲು ಬ್ಯಾಟ್ ಮಾಡಿದ ಕ್ರಿಕೆಟ್ ದೈತ್ಯರು ಕ್ರಿಕೆಟ್ ಜನಕರ ದಾಳಿಗೆ ತತ್ತರಿಸಿ ಕೇವಲ 55 ರನ್‌ಗೆ ಆಲೌಟ್ ಆಯಿತು. ಸುಲಭ ಗುರಿ ಪಡೆದರೂ ಇಂಗ್ಲೆಂಡ್ ಒಂದು ಹಂತದಲ್ಲಿ ಒತ್ತಡಕ್ಕೆ ಸಿಲುಕಿತು. ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ನಿಧಾನಗತಿಯ ಆರಂಭ ನೀಡಿದರು. ರವಿ ರಾಂಪಾಲ್ ಈ ಜೋಡಿಯನ್ನು ಬೇರ್ಪಡಿಸಿದರು. 21 ರನ್‌ಗೆ ಇಂಗ್ಲೆಂಡ್ ಮೊದಲ ವಿಕೆಟ್ ಪತನಗೊಂಡಿತು. ಜೇಸನ್ ಬೆನ್ನಲ್ಲೇ 9 ರನ್ ಗಳಿಸಿದ ಜಾನಿ ಬೈರ್‌ಸ್ಟೋ ವಿಕೆಟ್ ಪತನಗೊಂಡಿತು. 3 ರನ್ ಗಳಿಸಿದ್ದ ಮೊಯಿನ್ ಆಲಿ ರನೌಟ್ ಆದರು. 3ನೇ ವಿಕೆಟ್ ಪತನ ಇಂಗ್ಲೆಂಡ್ ತಂಡಕ್ಕೆ ಆತಂಕ ತಂದೊಡ್ಡಿತು. 3ನೇ ವಿಕೆಟ್ ಪತನದ ವೇಳೆ ಇಂಗ್ಲೆಂಡ್ ಗೆಲುವಿಗೆ 88 ಎಸೆತಲ್ಲಿ 20 ರನ್ ಅವಶ್ಯಕತೆ ಇತ್ತು. ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 1 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಅಜೇಯ 24 ರನ್ ಸಿಡಿಸಿದರೆ, ಇಯಾನ್ ಮಾರ್ಗನ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್, ಆಂಗ್ಲರ ದಾಳಿಗೆ ನಲುಗಿ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಯಿತು. ಕ್ರಿಸ್ ಗೇಲ್ (13 ರನ್) ಮಾತ್ರ ಎರಡಂಕೆ ಮೊತ್ತ ದಾಖಲಿಸಿದ ಏಕಮಾತ್ರ ಆಟಗಾರ. ಮಿಕ್ಕ ಎಲ್ಲಾ ಆಟಗಾರರು ಒಂದಂಕಿಗೆ ಸೀಮಿತಗೊಂಡರು. ಅಂತಿಮವಾಗಿ ವಿಂಡೀಸ್ 14.2 ಓವರ್‌ಗಳಲ್ಲಿ ಕೇವಲ 55 ರನ್‌ಗೆ ಸರ್ವಪತನಗೊಂಡಿತು.
ಈ ಮೂಲಕ ವೆಸ್ಟ್ ಇಂಡೀಸ್ ಪರವಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ 3ನೇ ಅತಿ ಕಡಿಮೆ ಮೊತ್ತ ಇದಾಗಿದೆ. ವೆಸ್ಟ್ ಇಂಡೀಸ್ ಟಿ20 ಟೂರ್ನಿಯಲ್ಲಿ ಸಿಡಿಸಿದ 2ನೇ ಅತೀ ಕಡಿಮೆ ಮೊತ್ತ ಇದಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಹೀನಾಯ ಪ್ರದರ್ಶನ ನೀಡುವ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.
0 comments:
Post a Comment