ಶಾರ್ಜಾ, ಅಕ್ಟೋಬರ್ 26, 2021 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸರ್ವತೋಮುಖ ಪ್ರದರ್ಶನ ತೋರಿದ ಅಫಘಾನಿಸ್ತಾನ್ ಕ್ರಿಕೆಟ್ ತಂಡ ಸ್ಕಾಟ್ಲೆಂಡ್ ವಿರುದ್ದ 130 ರನ್ ಗಳ ಅಮೋಘ ಜಯ ದಾಖಲಿಸಿದೆ. ವಿಶ್ವಕಪ್ ಪಂದ್ಯದಲ್ಲಿ ಶುಭಾರಂಭಗೈದ ಅಫಘಾನ್ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತ್ತು. ನಜೀಬುಲ್ಲಾ 59, ಹಜರತುಲ್ಹಾ ಜಜೈ 44, ಗುರ್ಬಾಜ್ 46, ಮೊಹಮ್ಮದ್ ಶಹಝಾದ್ 22 ಹಾಗೂ ಮೊಹಮ್ಮದ್ ನಬಿ ಅಜೇಯ 11 ರನ್ ಮೂಲಕ ಆಫ್ಘಾನಿಸ್ತಾನ ಬೃಹತ್ ಮೊತ್ತ ಪೇರಿಸಿತು.
191 ರನ್ ಗಳ ಗುರಿ ಪಡೆದ ಸ್ಕಾಟ್‌ಲೆಂಟ್ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಜಾರ್ಜ್ ಮುನ್ಸೆ ಸಿಡಿಸಿದ 25 ರನ್ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೈಯಲ್ ಕೋಯೆಟ್ಜರ್ 10 ರನ್ ಹಾಗೂ ಕ್ರಿಸ್ ಗೇವಸ್ 12 ರನ್ ಸಿಡಿಸಿದರು. ಐದು ಮಂದಿ ದಾಂಡಿಗರು ಶೂನ್ಯ ಸಂಪಾದನೆ ಮಾಡಿದರು. ಮುಜೀಬುರ್ರಹ್ಮಾನ್ ಹಾಗೂ ರಶೀದ್ ಖಾನ್ ದಾಳಿಗೆ ಸ್ಕಾಟ್‌ಲೆಂಡ್ ತತ್ತರಿಸಿತು. 10.2 ಓವರ್‌ಗಳಿಗೆ ಸ್ಕಾಟ್‌ಲೆಂಡ್ ತನ್ನಲ್ಲಾ 10 ವಿಕೆಟ್ ಕಳೆದುಕೊಂಡು 60 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಫ್ಘಾನಿಸ್ತಾನ 130 ರನ್ ಗೆಲುವು ಸಾಧಿಸಿತು. ಮಜೀಬ್ 5 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ವಿಕೆಟ್ ಉರುಳಿಸಿದರು. ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿದರು.
ಸ್ಕಾಟ್‌ಲೆಂಡ್ ವಿರುದ್ಧ 130 ರನ್ ಭರ್ಜರಿ ಗೆಲುವು ಸಾಧಿಸಿದ ಆಫ್ಘಾನಿಸ್ತಾನ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿ ಮೊದಲ ಸ್ಥಾನ ಅಲಂಕರಿಸಿದ್ದ ಪಾಕಿಸ್ತಾನ ತಂಡವನ್ನು ಆಫ್ಘಾನಿಸ್ತಾನ ಹಿಂದಿಕ್ಕಿದೆ. 6.500 ನೆಟ್‌ರನ್‌ರೇಟ್ ನೊಂದಿಗೆ ಆಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2ನೇ ಸ್ಥಾನಕ್ಕೆ ಕುಸಿದಿದೆ.
0 comments:
Post a Comment