ಶಾರ್ಜಾ, ಅಕ್ಟೋಬರ್ 25, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಯ ಭಾನುವಾರ ಸಂಜೆ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದೆ.
ಬಾಂಗ್ಲಾದೇಶ ನಿಗದಿಪಡಿಸಿದ್ದ 172 ರನ್‍ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‍ನಲ್ಲೇ ಆರಂಭಿಕ ದಾಂಡಿಗ ಕುಸಾಲ್ ಪೆರೆರಾ ಕೇವಲ ಒಂದು ರನ್ ಬಾರಿಸಿ ನಸುಮ್ ಅಹಮ್ಮದ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಪತುಮ್ ನಿಸ್ಸಾಂಕ ಹಾಗೂ ಚರಿತ್ ಅಸಲಂಕಾ ಜೋಡಿ ಎಚ್ಚರಿಕೆ ಹಾಗೂ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟಿಗೆ ಈ ಜೋಡಿ 69 ರನ್‍ಗಳ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು.
ಎರಡನೇ ವಿಕೆಟ್‍ಗೆ ಉತ್ತಮ ಜತೆಯಾಟ ನಿಭಾಯಿಸುತ್ತಿದ್ದ ಈ ಜೋಡಿಯನ್ನು ಅನುಭವಿ ಸ್ಪಿನ್ನರ್ ಶಕೀಬ್ ಅಲ್ ಹಸನ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಒಂದೇ ಓವರಿನಲ್ಲಿ ಸಕೀಬ್ 2 ವಿಕೆಟ್ ಕಬಳಿಸಿದರು. ಪತುಮ್ (24 ರನ್) ಹಾಗೂ ಅವಿಷ್ಕಾ ಫೆರ್ನಾಂಡೋ ಇಬ್ಬರನ್ನೂ ಶಕೀಬ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಸುವಲ್ಲಿ ಸಫಲರಾದರು. ಈ ಮೂಲಕ ಶಕೀಬ್ ಅಲ್ ಹಸನ್ ಅವರು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ (41 ವಿಕೆಟ್ ಗಳಿಸಿದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.
ಒಂದೇ ಓವರ್‍ನಲ್ಲಿ 2 ವಿಕೆಟ್ ಕಳೆದುಕೊಂಡು ಲಂಕಾ ಪತನದತ್ತ ಕುಸಿದು, ಬಾಂಗ್ಲಾದೇಶ ಪಂದ್ಯದಲ್ಲಿ ಹಿಡಿತ ಸಾಧಿಸುವತ್ತ ಸಾಗಿತ್ತು. ವನಿಂದು ಹಸರಂಗ ಕೂಡಾ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ 5ನೇ ವಿಕೆಟ್‍ಗೆ ಅಸಲಂಕಾ ಹಾಗೂ ಭಾನುಕ ರಾಜಪಕ್ಸಾ ಜೋಡಿ 86 ರನ್‍ಗಳ ಜತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಸಲಂಕಾ 49 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಬಾರಿಸಿದರೆ, ರಾಜಪಕ್ಸಾ ಕೇವಲ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ 16ನೇ ಓವರ್‍ನಲ್ಲಿ ರಾಜಪಕ್ಸಾ 22 ರನ್ ಕಲೆಹಾಕುವ ಮೂಲಕ ಪಂದ್ಯ ಸಂಪೂರ್ಣ ಲಂಕಾದತ್ತ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಆರಂಭಿಕ ಬ್ಯಾಟ್ಸ್‍ಮನ್ ಮೊಹಮ್ಮದ್ ನಯೀಮ್ (62) ಹಾಗೂ ಮುಷ್ಫಿಕುರ್ ರಹೀಮ್ (ಅಜೇಯ 57) ಅವರ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು.
0 comments:
Post a Comment