ದುಬೈ, ಅಕ್ಟೋಬರ್ 25, 2021 (ಕರಾವಳಿ ಟೈಮ್ಸ್) : ಐಸಿಸಿ ವಿಶ್ವಕಪ್ ಕೂಟಗಳಲ್ಲಿ ಇದುವರೆಗೆ ಪಾಕಿಸ್ತಾನ ವಿರುದ್ದ ಅಜೇಯ ದಾಖಲೆ ಹೊಂದಿದ್ದ ಟೀಂ ಇಂಡಿಯಾ ಭಾನುವಾರ ದುಬೈ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಕೂಟದ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಅಕ್ಷರಶಃ ಮುಗ್ಗರಿಸಿ ಬಿತ್ತು. ಪಾಕಿಸ್ತಾನ ತಂಡ ಟೀಂ ಇಂಡಿಯಾ ನೀಡಿದ ಸವಾಲನ್ನು ಭರ್ಜರಿಯಾಗಿ ಮೆಟ್ಟಿ ನಿಂತು ನೋಲಾಸ್ ವಿಜಯವನ್ನು ತನ್ನದಾಗಿಸಿಕೊಂಡಿತು.
ಭಾನುವಾರ ರಾತ್ರಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರರು ಭರ್ಜರಿಯಾಗಿ ಬ್ಯಾಟ್ ಬೀಸಿ ಇಬ್ಬರೂ ಅರ್ಧ ಶತಕ ಭಾರಿಸಿ ಭಾರತಕ್ಕೆ 10 ವಿಕೆಟ್‍ಗಳ ಅಂತರದ ಸೋಲುಣಿಸಿದೆ. ಈ ಮೂಲಕ ಪಾಕಿಸ್ತಾನ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟ್‍ನ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿ ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ದ ಮೊದಲ ಬಾರಿಗೆ ಮುಗ್ಗರಿಸಿ ಮುಖಭಂಗಕ್ಕೊಳಗಾಗಿದೆ.
ಕಾಶ್ಮೀರದಲ್ಲಿ ಪಾಕ್ ಪ್ರೇರಿತ ನರಮೇಧ ಮುಂದುವರಿಯುತ್ತಿರುವ ಮಧ್ಯೆಯೇ ಪಾಕಿಸ್ತಾನ ವಿರುದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡುವುದನ್ನು ಸಾಕಷ್ಟು ಮಂದಿ ವಿರೋಧಿಸಿದ್ದರ ನಡುವೆ ಭಾನುವಾರ ಪಂದ್ಯ ನಿರಾಯಾಸವಾಗಿ ಸಾಗಿತ್ತು. ಬದ್ಧವೈರಿಗಳ ವಿರುದ್ದದ ಭಾರತದ ಹಿನ್ನಡೆ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸೋಲಾಗಿ ಪರಿಣಮಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಮತ್ತೆ ಪಾಕಿಸ್ತಾನ ವಿರುದ್ಧ ಬಾರತ ಮುಗ್ಗರಿಸಿ ಬಿದ್ದಿದೆ.
ಗೆಲ್ಲಲು 152 ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 17.5 ಓವರ್‍ಗಳಲ್ಲಿ ಯಾವುದೇ ವಿಕೆಟ್ ಎದುರಾಳಿ ಭಾರತಕ್ಕೆ ಬಿಟ್ಟುಕೊಡದೆ ನೋಲಾಸ್ ಜಯ ಸಾಧಿಸಿತು. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಟವಾಡಿದ ಪಾಕಿಸ್ತಾನದ ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಝಂ ನಿರಾತಂಕವಾಗಿ ಬ್ಯಾಟ್ ಬೀಸಿದರು. ಭಾರತ ಐದು ಮಂದಿ ಬೌಲರ್ ಗಳನ್ನು ಬಳಸಿಕೊಂಡರೂ ಒಂದೇ ಒಂದು ವಿಕೆಟ್ ಕಬಳಿಸಲು ವಿಫಲರಾದರು. ಪಾಕ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ಮೊಹಮ್ಮದ್ ರಿಜ್ವಾನ್ (ಅಜೇಯ 78 ರನ್, 55 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಬಾಬರ್ ಅಝಂ (ಅಜೇಯ 68 ರನ್, 52 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿ 152 ರನ್ (107 ಎಸೆತ) ಜೊತೆಯಾಟವಾಡಿತು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಭಾರತ ಆರಂಭದಲ್ಲೇ ಮುಗ್ಗರಿಸಿತು. ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರೀದಿ ಭಾರತಕ್ಕೆ ಭಾರೀ ಆಘಾತವನ್ನೇ ನೀಡಿದರು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಸಾಗಿದರು. ಬಳಿಕ ಕೆ.ಎಲ್. ರಾಹುಲ್ ಕೂಡಾ ಕೇವಲ 3 ರನ್ (8 ಎಸೆತ) ಗಳಿಸಿ ಔಟಾದರು. ಆರಂಭಿಕ ಆಘಾತ ಅನುಭವಿಸಿದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ಪ್ರತಿರೋಧ ತೋರಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಕೊಹ್ಲಿ 57 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ 18ನೇ ಓವರಿನಲ್ಲಿ ಔಟಾದರು. ರಿಷಬ್ ಪಂಥ್ 39 ರನ್ (30 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ-ಪಂಥ್ ಜೋಡಿ 4ನೇ ವಿಕೆಟ್‍ಗೆ 53 ರನ್ (40 ಎಸೆತ) ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು.
ಆಲ್‍ರೌಂಡರ್ ಆಟಗಾರರಾದ ರವೀಂದ್ರ ಜಡೇಜಾ 13 ರನ್ (13 ಎಸೆತ, 1 ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ 11 ರನ್ (8 ಎಸೆತ 2 ಬೌಂಡರಿ) ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಾಕಿಸ್ತಾನಕ್ಕೆ 152 ರನ್ ಗುರಿ ನಿಗದಿಪಡಿಸಿತು.
ಪಾಕಿಸ್ತಾನ ಪರ ಶಾಹೀನ್ ಶಾ ಆಫ್ರಿದಿ 3 ವಿಕೆಟ್ ಗಳಿಸಿ ಮಿಂಚಿದರೆ, ಹಸನ್ ಅಲಿ 2, ಶಾದಬ್ ಖಾನ್ ಹಾಗೂ ಹೌರಿಸ್ ರೌಫ್ ತಲಾ 1 ವಿಕೆಟ್ ಪಡೆದರು.
0 comments:
Post a Comment