ಅಬುಧಾಬಿ, ಅಕ್ಟೋಬರ್ 27, 2021 ( ಕರಾವಳಿ ಟೈಮ್ಸ್) : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಇಂಗ್ಲೆಂಡ್ ಭರ್ಜರಿ 8 ವಿಕೆಟ್ ಅಂತರದ ಜಯಗಳಿಸುವುದರೊಂದಿಗೆ ಕೂಟದಲ್ಲಿ 2ನೇ ಗೆಲುವು ದಾಖಲಿಸಿದೆ.
ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನಿಗದಿಪಡಿಸಿದ್ದ 125 ರನ್‍ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕ್ರಿಕೆಟ್ ತಂಡ ಇನ್ನೂ 35 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‍ಗಳ ಗೆಲುವು ದಾಖಲಿಸಿದೆ. ಈ ಮೂಲಕ ಇಂಗ್ಲಂಡ್ ಅಂಕಪಟ್ಟಿಯಲ್ಲಿ ಅಗ್ರಪಟ್ಟಕ್ಕೇರಿದೆ. ಸತತ 2 ಸೋಲು ಕಂಡ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಇಂಗ್ಲಂಡ್ ತಂಡ ಎಚ್ಚರಿಕೆಯ ಆಟವಾಡುವ ಮೂಲಕ ನಿರೀಕ್ಷಿತ ಜಯ ದಾಖಲಿಸಿದೆ. ಮೊದಲ ವಿಕೆಟ್‍ಗೆ ಜೇಸನ್ ರಾಯ್ (61 ರನ್, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಜೋಸ್ ಬಟ್ಲರ್ ಜೋಡಿ (18 ರನ್, 18 ಎಸೆತ, ಒಂದು ಬೌಂಡರಿ, 1 ಸಿಕ್ಸರ್) 4.5 ಓವರ್‍ಗಳಿಗೆ 39 ರನ್‍ಗಳ ಜತೆಯಾಟವಾಡಿತು. ಜೋಸ್ ಬಟ್ಲರ್ ನಸುಮ್ ಅಹಮ್ಮದ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ 2ನೇ ವಿಕೆಟ್‍ಗೆ ಜೊತೆಯಾದ ಜೇಸನ್ ರಾಯ್-ಡೇವಿಡ್ ಮಲಾನ್ ಜೋಡಿ 73 ರನ್‍ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ದರು.
ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೇಸನ್ ರಾಯ್ ಶರಫುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಲಾನ್ ಅಜೇಯ 28 ಹಾಗೂ ಜಾನಿ ಬೇರ್‍ಸ್ಟೋವ್ 8 ರನ್ ಭಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ ಇಂಗ್ಲೆಂಡ್ ಸ್ಪಿನ್ನರ್ ಮೋಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್‍ಸ್ಟೋನ್ ಕಾಡಿದರು. ಪಂದ್ಯದ ಮೂರನೇ ಓವರ್‍ನಲ್ಲೇ ಮೊಯಿನ್ ಅಲಿ ಸತತ 2 ವಿಕೆಟ್ ಕಬಳಿಸಿ ಬಾಂಗ್ಲಾಗೆ ಆರಂಭಿಕ ಶಾಕ್ ನೀಡಿದರು. ಶಕೀಬ್ ಅಲ್ ಹಸನ್ (4 ರನ್) ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮುಷ್ಫಿಕುರ್ ರಹೀಮ್ (30 ರನ್) ಹಾಗೂ ಮೊಹಮದುಲ್ಲಾ (19 ರನ್) Àಸ್ವಲ್ಪ ಮಟ್ಟಿನ ಪ್ರತಿರೋಧ ತೋರಿ ತಂಡ ಮೂರಂಕಿ ಮೊತ್ತ ದಾಖಲಿಸಲು ನೆರವಾದರು. ಒಂದು ಹಂತದಲ್ಲಿ 83 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬಾಂಗ್ಲಾ ಕೆಳ ಕ್ರಮಾಂಕದ ದಾಂಡಿಗರು ಸಾಮಥ್ರ್ಯ ತೋರುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ವಿಕೆಟ್ ಕೀಪರ್ ಬ್ಯಾಟ್ಸ್‍ಮೆನ್ ನೂರುಲ್ ಹಸನ್ 18 ಎಸೆತಗಳನ್ನು ಎದುರಿಸಿ 16 ರನ್ ಬಾರಿಸಿದರೆ, ಮೆಹದಿ ಹಸನ್ 10 ಎಸೆತಗಳಲ್ಲಿ 2 ಬೌಂಡರಿ ಸಹಿತ 11 ರನ್ ಗಳಿಸಿದರು. ನಸುಮ್ ಅಹಮ್ಮದ್ 9 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 19 ರನ್‍ಗಳಿಸುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು.
0 comments:
Post a Comment