ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ಪರಿಶಿಷ್ಟ ಜಾತಿ-ಪಂಗಡಗಳ ಮನೆಗಳು ಇರುವ ಸ್ಥಳಗಳಿಗೆ ರಸ್ತೆಗಂತಂಹ ಮೂಲಭೂತ ಸೌಕರ್ಯಗಳ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅಕ್ಟೋಬರ್ 24 ರಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಿಲ್ಲೆಯ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಹಿತ ಇತರ ಪಂಗಡಗಳ ಮಂದಿ ಇರುವ ಮನೆಗಳಿಗೆ ಸಂಪರ್ಕ ರಸ್ತೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆಗಳು ತಲೆದೋರಿದ್ದು, ರಸ್ತೆ ನಿರ್ಮಾಣಕ್ಕೆ ಖಾಸಗಿ ಜಮೀನು ಅಡ್ಡಿಯಾದರೆ ಅವುಗಳನ್ನು ಸರಕಾರ ಸ್ವಾಧೀನ ಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ ಅವರು ಜಿಲ್ಲೆಯ ಸುಳ್ಯ ತಾಲೂಕು ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಂಬೇಡ್ಕರ್ ಭವನಗಳ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಅವುಗಳ ಕಾಮಗಾರಿಗಳನ್ನೂ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ನಿವೃತ್ತ ಸೈನಿಕರ ಜಮೀನಿನ ಅರ್ಜಿಗಳಿಗೆ ಸ್ಪಂದನೆ ನೀಡಿ ಜಾಗ ಮಂಜೂರು ಮಾಡುವ ಕಾರ್ಯವೂ ಮಾಡಬೇಕು ಎಂದವರು ಒತ್ತಾಯಿಸಿದರು.
ರಸ್ತೆ ವಂಚಿತರಾಗಿರುವ 16 ಕಾಲನಿಗಳ ಹಾಗೂ ಕಾಂಕ್ರಿಟೀಕರಣ ಆಗಲು ಬಾಕಿ ಇರುವ ಕಾಲನಿಗಳ ಪಟ್ಟಿ ಪ್ರಸ್ತುತಪಡಿಸಿದ ಅವರು, ಎಲ್ಲಾ ಬೇಡಿಕೆಗಳಿಗೆ ಸೂಕ್ತವಾದ ನ್ಯಾಯ ಒದಗಿಸದೆ ಇದ್ದಲ್ಲಿ ರಸ್ತೆ ವಂಚಿತರು, ಭೂವಂಚಿತ ನಿವೃತ್ತ ಸೈನಿಕರು ಮುಂಬರುವ ಎಲ್ಲಾ ಚುನಾವಣೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಲಾಗುವುದು ಎಂದು ಎಚ್ಚರಿಸಿದ ಸೇಸಪ್ಪ ಅವರು ರಸ್ತೆ ವಂಚಿತರು ಮುಂದಕ್ಕೆ ಯಾವುದೇ ಕಾರಣಕ್ಕೂ ಮನೆ ತೆರಿಗೆ ಕಟ್ಟದಿರಲು ಕೂಡಾ ನಿರ್ಧರಿಸಲಾಗುವುದು ಎಂದರು. ಜಿಲ್ಲಾಧಿಕಾರಿಗಳು ವಿಶೇಷವಾಗಿ ಕ್ರಮವಹಿಸುವ ಕಡತಗಳಿಗೆ ನ್ಯಾಯ ಒದಗಿಸಿ, ತಮ್ಮ ವ್ಯಾಪ್ತಿಗೆ ಬರದಿರುವ ಬೇಡಿಕೆಗಳನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದವರು ಇದೇ ವೇಳೆ ಆಗ್ರಹಿಸಿದರು.
ಈ ಸಂದರ್ಭ ಪ್ರಮುಖರಾದ ಸೋಮಪ್ಪ ನಾಯ್ಕ ಮಲ್ಯ, ಚಂದ್ರಶೇಖರ್ ಯು ವಿಟ್ಲ, ಗೋಪಾಲ್ ಕೆ ನೇರಳಕಟ್ಟೆ, ಕುಶಾಲಪ್ಪ ಮೂಡಂಬೈಲು, ಗಣೇಶ್ ಸೀಗೆಬಲ್ಲೆ, ಲಿಖಿತ್‍ಕುಮಾರ್ ಪಡ್ನೂರು ಜೊತೆಗಿದ್ದರು.
0 comments:
Post a Comment