ಬಂಟ್ವಾಳ, ಅಕ್ಟೋಬರ್ 15, 2021 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ಹೆಡ್ ಕಾನ್ಸ್‍ಟೇಬಲ್ ಅಬೂಬಕ್ಕರ್ ಯಾನೆ ಅಬ್ಬು (45) ಅವರು ಶುಕ್ರವಾರ ಮಧ್ಯಾಹ್ನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಹಾಗೂ ಜುಪಿಟರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೊಂದು ದ್ವಿಚಕ್ರ ವಾಹನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ವೇಣೂರು ಸಮೀಪದ ಮರೋಳಿ ನಿವಾಸಿಯಾಗಿರುವ ಪೊಲೀಸ್ ಅಬ್ಬು ಎಂದೇ ಸಾರ್ವಜನಿಕರಿಂದ ಗುರುತಿಸಲ್ಪಟ್ಟಿದ್ದ ಸರಳ-ಸಜ್ಜನಿಕೆಯ ಸ್ವಭಾವ ಮೈಗೂಡಿಸಿಕೊಂಡಿದ್ದ ಅಬೂಬಕ್ಕರ್ ಅವರು ಪೂಂಜಾಲಕಟ್ಟೆ ಠಾಣೆಯಲ್ಲೂ ಓರ್ವ ಜನಸ್ನೇಹಿ ಪೊಲೀಸ್ ಸಿಬ್ಬಂದಿಯಾಗಿ ಗುರುತಿಸಿಕೊಂಡಿದ್ದರು.
ಶಕ್ರವಾರ ಮಧ್ಯಾಹ್ನ ವಾಮದಪದವಿನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿಗಳ ಜೊತೆ ಭಾಗವಹಿಸಿ ವಾಪಾಸು ಬರುತ್ತಿದ್ದ ವೇಳೆ ನೇರಳಕಟ್ಟೆಯಲ್ಲಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಅಪಘಾತ ನಡೆದ ತಕ್ಷಣ ಹಿಂದಿನಿಂದ ಬರುತ್ತಿದ್ದ ಠಾಣೆಯ ಇಲಾಖಾ ಜೀಪಿನಲ್ಲಿದ್ದ ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದ ಅಬೂಬಕ್ಕರ್ ಅವರನ್ನು ಇಲಾಖಾ ಜೀಪಿನಲ್ಲೇ ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರಾದರೂ ಅಲ್ಲಿ ವೈದ್ಯರಾಗಲೀ, ಸಿಬ್ಬಂದಿಗಳಾಗಲೀ ಇಲ್ಲದೆ ಕೇಂದ್ರಕ್ಕೆ ಬೀಗ ಹಾಕಿದ್ದ ಪರಿಣಾಮ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗಳು ಮತ್ತೆ ಅಲ್ಲಿಂದ ಬಂಟ್ವಾಳ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರ ಗಾಯಗೊಂಡ ಎಚ್ ಸಿ ಅಬೂಬಕ್ಕರ್ ಅವರು ದಾರಿ ಮಧ್ಯೆ ಇಲಾಖಾ ಸಹೋದ್ಯೋಗಿಗಳ ಕಣ್ಣೆದುರಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಮೂರು ಮಂದಿ ಸಹೋದರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಬೂಬಕ್ಕರ್ ಅವರು ವೇಣೂರು, ಮೂಡಬಿದ್ರಿ, ಧರ್ಮಸ್ಥಳ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಪೂಂಜಾಲಕಟ್ಟೆ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದರು.
0 comments:
Post a Comment