ಬಂಟ್ವಾಳ, ಅಕ್ಟೋಬರ್ 06, 2021 (ಕರಾವಳಿ ಟೈಮ್ಸ್) : ಕೊರೋನಾ-ಲಾಕ್ ಡೌನ್ ಸಂಕಷ್ಟದಿಂದ ಬೆಂದು ಬಸವಳಿದಿದ್ದ ತಾಲೂಕಿನ ರೈತರ ಪಾಲಿಗೆ ಇತ್ತೀಚೆಗೆ ಸುರಿದ ಗಾಳಿ ಸಹಿತ ಭಾರೀ ಮಳೆ ಫಸಲು ಭರಿತ ಮರ-ಗಿಡಗಳನ್ನೇ ಆಹುತಿ ಪಡೆಯುವ ಮೂಲಕ ಸಾಕಷ್ಟು ನಷ್ಟ ತಂದೊಡ್ಡಿದೆ. ರೈತರ ಕಷ್ಟವನ್ನು ಈಗಾಗಲೇ ಕಣ್ಣಾರೆ ಕಂಡುಕೊಂಡ ನನಗೆ ತೀವ್ರ ಮನಸ್ಸಿಗೆ ಆಘಾತವಾಗಿದೆ. ಈ ಬಗ್ಗೆ ಸರಕಾರ ಸಾಮಾನ್ಯ ಪರಿಹಾರದ ನೆಪವನ್ನೇ ತೋರದೆ ಯುದ್ದೋಪಾದಿಯಲ್ಲಿ ಶೀಘ್ರಾತಿಶೀಘ್ರ ವಿಶೇಷ ಪ್ಯಾಕೇಜ್ ಒದಗಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಜಿಲ್ಲಾಡಳಿತ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಿ ಸಿ ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಲೂಕಿನ ತೆಂಕಕಜೆಕಾರು, ಉಳಿ, ಪಂಜಿಕಲ್ಲು, ಮೂಡುನಡುಗೋಡು, ಬುಡೋಳಿ ಮೊದಲಾದ ಗ್ರಾಮಗಳಲ್ಲಿ ಇತ್ತೀಚೆಗೆ ಭಾರೀ ಸುಂಟರಗಾಳಿ ಬೀಸಿದ್ದು, ರೈತರ ಅತ್ಯಂತ ಹೆಚ್ಚಿನ ಫಸಲುಭರಿತ ಕೃಷಿಗಳೇ ಆಹುತಿಯಾಗಿದ್ದು, ಭಾರೀ ನಷ್ಟ ಸಂಭವಿಸಿದೆ ಎಂದ ರಮಾನಾಥ ರೈ ಅವರು ಈಗಾಗಲೇ ಈ ಎಲ್ಲಾ ಪ್ರದೇಶಗಳಿಗೂ ಖುದ್ದು ಭೇಟಿ ನೀಡಿ ರೈತರ ಸಂಕಷ್ಟವನ್ನು ಹತ್ತಿರದಿಂದ ಕಂಡುಕೊಂಡಿದ್ದೇನೆ. ಈ ಎಲ್ಲಾ ರೈತರ ಕಷ್ಟಗಳಿಗೆ ಸರಕಾರ ವಿಶೇಷ ಪ್ಯಾಕೇಜ್ ಮೂಲಕ ತಕ್ಷಣ ಸ್ಪಂದಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ತಾಲೂಕಿನ ನರಿಕೊಂಬು ಹಾಗೂ ಅನಂತಾಡಿ ಗ್ರಾಮಗಳಲ್ಲಿ ಇಂತಹದೇ ಸುಂಟರ ಗಾಳಿ ಹಾಗೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ರೈತರಿಗೆ ಭಾರೀ ನಷ್ಟ ಉಂಟಾದ ಸಂದರ್ಭದಲ್ಲಿ ಸರಕಾರ ತಕ್ಷಣ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು. 24 ಗಂಟೆಗಳ ಅವಧಿಯಲ್ಲಿ ನಷ್ಟಕ್ಕೊಳಗಾದ ರೈತರಿಗೆ ಸಮಾಧಾನವಾಗುವ ರೀತಿಯ ಪರಿಹಾರವನ್ನು ನೀಡಲಾಗಿತ್ತು. ಸ್ಥಳದಲ್ಲೇ ನಗದು ಹಸ್ತಾಂತರಿಸುವ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡಿತ್ತು. ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಸರಕಾರ ಇಂತಹ ಕ್ರಮ ಕೈಗೊಂಡಿತ್ತು. ಇದ್ಯಾವುದನ್ನೂ ಕೇವಲ ರಾಜಕೀಯ ಮಾಡುವ ಉದ್ದೇಶದಿಂದಲೋ ಅಥವಾ ದೊಡ್ಡಸ್ಥಿಕೆ ತೋರ್ಪಡಿಸುವ ಉದ್ದೇಶದಿಂದಲೋ ಹೇಳುತ್ತಿಲ್ಲ. ಸರಕಾರದಿಂದ ಈ ಪರಿಹಾರ ಮೊತ್ತ ಪಡೆದ ರೈತರು ಇಂದಿಗೂ ಇದ್ದಾರೆ. ಸಂಶಯ ಇದ್ದವರು ಈ ಗ್ರಾಮಗಳಲ್ಲಿ ಸಂಚರಿಸಿ ಸ್ವತಃ ರೈತರಲ್ಲಿ ವಿಚಾರಿಸಿ ತಿಳಿದುಕೊಳ್ಳಬಹುದು ಎಂದ ರಮಾನಾಥ ರೈ ಇದೇ ರೀತಿಯ ಯುದ್ದೋಪಾದಿ ಪರಿಹಾರ ಕ್ರಮ ಹಾಗೂ ಶೀಘ್ರ ಪರಿಹಾರ ವಿತರಣೆ ಇಂದಿನ ಕೊರೋನಾ-ಲಾಕ್ ಡೌನ್ ಕಷ್ಟದಲ್ಲಿರುವ ರೈತರು ಅನುಭವಿಸಿದ ನಷ್ಟದ ಸಂದರ್ಭದಲ್ಲಿ ಸರಕಾರ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಆನಂದ ಶಂಭೂರು, ದೇವಪ್ಪ ಕುಲಾಲ್ ಮೊದಲಾದ ಜೊತೆಗಿದ್ದರು.
0 comments:
Post a Comment