ಬೆಂಗಳೂರು, ಅಕ್ಟೋಬರ್ 24, 2021 (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ಹಾಗೂ ಲಾಕ್ ಡೌನ್ ಕಾರಣದಿಂದ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಪ್ರಾಥಮಿಕ ಶಾಲಾ ಭೌತಿಕ ತರಗತಿಗಳು ಸರಕಾರದ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಹೊಸ ಮಾರ್ಗಸೂಚಿಯಂತೆ ನಾಳೆಯಿಂದ (ಅಕ್ಟೋಬರ್ 25) ಮತ್ತೆ ತೆರೆದುಕೊಳ್ಳಲಿದೆ. 1 ರಿಂದ 5ನೇ ತರಗತಿ ಮಕ್ಕಳು ನಾಳೆಯಿಂದ ಸುದೀರ್ಘ ಸಮಯದ ಬಳಿಕ ಶಾಲೆಗಳತ್ತಹೆಜ್ಜೆ ಹಾಕಲಿದ್ದಾರೆ.
ಮಕ್ಕಳು ಶಾಲೆಗೆ ಹಾಜರಾಗಲು ಪೂರಕವಾಗಿ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧ ದಿನ ಶೇ 50 ರಷ್ಟು ಹಾಜರಾತಿಯಲ್ಲಿ ಭೌತಿಕ ತರಗತಿ ನಡೆಸಲು ಅನುಮತಿ ನೀಡಲಾಗಿದೆ. ಶನಿವಾರ ಹಾಗೂ ಭಾನುವಾರ ಶಾಲಾ ಕೊಠಡಿ ಹಾಗೂ ಕಟ್ಟಡ, ಪರಿಸರಗಳಲ್ಲಿ ಸ್ವಚ್ಛತೆ ಹಾಗೂ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.
ದಿನ ಬಿಟ್ಟು ದಿನ ತರಗತಿ ನಡಸಲು ಶಿಕ್ಷಣ ಇಲಾಖೆ ಸೂಚಿಸಿದ್ದು, ತರಗತಿಗೆ ಹಾಜರಾಗುವ ಮಕ್ಕಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದ್ದು, ಒಪ್ಪಿಗೆ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕಿನ ಲಕ್ಷಣ ಇಲ್ಲದೆ ಇರುವ ಬಗ್ಗೆ ಪೋಷಕರು ದೃಢೀಕರಿಸಬೇಕು. ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯನ್ನು ಶಾಲೆಗಳಲ್ಲೇ ಮಾಡುವಂತೆ ಸೂಚಿಸಲಾಗಿದೆ.
ಅಕ್ಟೋಬರ್ 25 ರಿಂದ ನವೆಂಬರ್ 2ರವರೆಗೂ ಅರ್ಧ ದಿನ ಮಾತ್ರ ತರಗತಿ, ನವೆಂಬರ್ 2 ರಿಂದ ಪೂರ್ತಿ ದಿನ ತರಗತಿ ನಡೆಸಲು ಸೂಚಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗಳೂ ಮುಂದುವರೆಯಲಿದ್ದು, ಆಯ್ದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿ ಪೋಷಕರಿಗೆ ನೀಡಲಾಗಿದೆ. 15 ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಎರಡೂ ಡೋಸ್ ಪಡೆದ ಶಿಕ್ಷಕರು ಮಾತ್ರ್ರ ಪಾಠ ಮಾಡುವಂತೆ ಸೂಚಿಸಲಾಗಿದೆ.
0 comments:
Post a Comment