ಬಂಟ್ವಾಳ, ಅಕ್ಟೋಬರ್ 29, 2021 (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸರಕಾರದ ಎಲ್ಲಾ ಜನಪರ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರದ "ಸಾಲ ಸಂಪರ್ಕ" ಮತ್ತು ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಅಕ್ಟೋಬರ್ 30 ರಂದು ಶನಿವಾರ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗುರುವಾರ ಬಂಟವಾಳದ ಬಂಟರ ಭವನದಲ್ಲಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರ್ವಜನಿಕ, ಖಾಸಗಿ ವಲಯ, ಪ್ರಾದೇಶಿಕ ಬ್ಯಾಂಕುಗಳು, ಡಿಸಿಸಿಬಿ, ಎಂಎಫ್ ಐಗಳು, ಎಸ್ ಬಿ ಎಫ್ ಸಿಗಳು, ನಬಾರ್ಡ್, ಕೆವಿಐಸಿ, ಕೆವಿಐಬಿ, ಡಿಐಸಿ, ಮೀನುಗಾರಿಕೆ, ಪಶುಸಂಗೋಪನೆ ಸಹಿತ ಇತರ ಇಲಾಖೆಗಳು ಇದರಲ್ಲಿ ಭಾಗವಹಿಸಲಿದ್ದು, ವಿವಿಧ ಸಾಲ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು, ಸಾಲದ ಅರ್ಜಿ ಸ್ವೀಕಾರ,ಮಂಜೂರಾತಿ, ತಾತ್ವಿಕ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುವುದು ಎಂದರು.
ವಿಶೇಷವಾಗಿ ಆತ್ಮನಿರ್ಭರ ಯೋಜನೆಗಳಾದ ಪಿಎಂಎಸ್ ಬಿವೈ, ಪಿಎಂಜೆಜೆಬಿವೈ, ಎಪಿವೈಯಂತಹ ವಿವಿಧ ಪಿಎಂ ಜನಸುರಕ್ಷಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಮುದ್ರಾ ಸಾಲ ಯೋಜನೆಯಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದು, ಜನಧನ್ ಖಾತೆಯಲ್ಲಿ 100 ಶೇ. ಪ್ರಗತಿ ಸಾಧಿಸಿದೆ ಎಂದು ನಳಿನ್ ಇದೇ ವೇಳೆ ತಿಳಿಸಿದರು.
ಗ್ರಾಹಕರಿಗೆ ಉತ್ತಮ ಸೇವೆ ನೀಡಿವ ನಿಟ್ಟಿನಲ್ಲಿ ಸ್ಥಳೀಯ ಕನ್ನಡ ಭಾಷಕಾರರನ್ನು ನೇಮಿಸಲಾಗುತ್ತದೆ. ಐಬಿಬಿ ಪರೀಕ್ಷೆ ಕನ್ನಡದಲ್ಲೇ ಬರೆಯಬೇಕು ಎಂಬ ನಿಯಮವು ಇದೆಯಲ್ಲದೆ ಹೊರ ರಾಜ್ಯದ ಸಿಬ್ಬಂದಿಗಳಿಗೆ ಯೂಟ್ಯೂಬ್ ಹಾಗೂ ಕನ್ನಡ ಸಂಘಗಳ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ನ ಮಹಾ ಪ್ರಬಂಧಕ ಯೋಗೀಶ್ ಆಚಾರ್ಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದು ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು, ಸಚಿವರಾದ ಎಸ್ . ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಎಲ್ಲಾ ಶಾಸಕರು, ವಿವಿಧ ನಿಗಮದ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ. ಕುಮಾರ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರವೀಣ್ , ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ ಮೊದಲಾದವರು ಈ ಸಂದರ್ಭ ಜೊತೆಗಿದ್ದರು.
0 comments:
Post a Comment