ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ಓರ್ವ ಮಹಿಳೆಯಾಗಿ ಇನ್ನೊಂದು ಧರ್ಮದ ಮಹಿಳೆಯರನ್ನು ನಿಂದಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ನಿರ್ದಿಷ್ಟ ಧರ್ಮದ ಯುವಕರನ್ನು ಪ್ರೇರೇಪಿಸಿದ ಚೈತ್ರಾ ಕುಂದಾಪುರ ಎಂಬ ಬಾಡಿಗೆ ಭಾಷಣಗಾರ್ತಿಯ ವರ್ತನೆ ಅತ್ಯಂತ ಖಂಡನೀಯ ಎಂದು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಮಾಜದಲ್ಲಿ ಏನಾದರೂ ಮನುಷ್ಯ ಸಹಾಯಿ ಕಾರ್ಯಗಳನ್ನು ಮಾಡಿ ದೊಡ್ಡಸ್ಥಿಕೆ ಸಂಪಾದಿಸಬೇಕೇ ಹೊರತು ಬಾಡಿಗೆ ಭಾಷಣಗಾರಳಾಗಿ ಬಾಯಿಗೆ ಬಂದುದನ್ನು ಮಾತನಾಡಿ ದೊಡ್ಡ ಜನ ಆಗುತ್ತೇನೆಂದುಕೊಂಡರೆ ಅದು ಚೈತ್ರಾಳ ಕನಸು ಮಾತ್ರ. ಇಂತಹ ಕೃತ್ಯ ಮುಂದುವರಿಸಿದೆ ಚೈತ್ರಾ ವಿರುದ್ದ ಮಹಿಳಾ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಚೈತ್ರಾಳ ಕೆಟ್ಟ ಭಾವನೆಗಳನ್ನು ಬಿಂಬಿಸುವ ಭಾಷಣದಿಂದಾಗಿ ಇಡೀ ಮಹಿಳಾ ಸಮುದಾಯ ತಲೆತಗ್ಗಿಸುವಂತಾಗಿದೆ. ಜಿಲ್ಲೆಯಲ್ಲಿ ಸಹೋದರ-ಸಹೋದರಿಯರಂತೆ ಬಾಳುತ್ತಿರುವ ಎಲ್ಲಾ ಜಾತಿ, ಧರ್ಮ, ಭಾಷೆಯ ಜನರ ನೆಮ್ಮದಿಯ ಜೀವನಕ್ಕೆ ವಿಷವಿಕ್ಕಲು ಪ್ರಯತ್ನಿಸಿದರೆ ಅದಕ್ಕೆ ಅದೇ ರೀತಿಯಲ್ಲಿ ಪ್ರತ್ಯುತ್ತರಿಸಲು ಮಹಿಳಾ ಕಾಂಗ್ರೆಸ್ ಶಕ್ತವಾಗಿದೆ ಎಂದು ತಿರುಗೇಟು ನೀಡಿದ ಜಯಂತಿ ಪೂಜಾರಿ ಚೈತ್ರಾಳ ಇಂತಹ ಮಾನವ ವಿರೋಧಿ ಭಾಷಣದ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಡಾ ಭರತ್ ಶೆಟ್ಟಿ ಭಾಗವಹಿಸಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತಾಗಿದೆ. ಇಂತಹ ಪ್ರಚೋದನಕಾರಿ ಮಾತುಗಳನ್ನು ಖಂಡಿಸುವ ಬದಲು ಸಮರ್ಥನೆ ಮಾಡುವುದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದವರು ಕಿಡಿ ಕಾರಿದರು.
ಬಿಜೆಪಿ ನಾಯಕ ಕುಮ್ಮಕ್ಕಿನಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೆÇೀಲಿಸ್ ಗಿರಿಯನ್ನು ಇದೇ ವೇಳೆ ಖಂಡಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ಪ್ರಮುಖರಾದ ಕಾಂಚಲಾಕ್ಷಿ, ಮಲ್ಲಿಕಾ ವಿ ಶೆಟ್ಟಿ, ಧನಲಕ್ಷ್ಮೀ, ಐಡಾ ಸುರೇಶ್, ಮಲ್ಲಿಕಾ ಪಕಳ ಜೊತೆಗಿದ್ದರು.
0 comments:
Post a Comment