ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಪುಳಕಿತಗೊಳಿಸಿದ್ದ ಎಂ.ಡಿ ಜಾದೂಗಾರ್ ಅವರಂತಹ ಜಾದೂಗಾರರ ಕಲೆಗೆ ಮನ್ನಣೆ ದೊರೆಯಬೇಕಾಗಿದೆ...... - Karavali Times ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಪುಳಕಿತಗೊಳಿಸಿದ್ದ ಎಂ.ಡಿ ಜಾದೂಗಾರ್ ಅವರಂತಹ ಜಾದೂಗಾರರ ಕಲೆಗೆ ಮನ್ನಣೆ ದೊರೆಯಬೇಕಾಗಿದೆ...... - Karavali Times

728x90

6 October 2021

ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಪುಳಕಿತಗೊಳಿಸಿದ್ದ ಎಂ.ಡಿ ಜಾದೂಗಾರ್ ಅವರಂತಹ ಜಾದೂಗಾರರ ಕಲೆಗೆ ಮನ್ನಣೆ ದೊರೆಯಬೇಕಾಗಿದೆ......

ಮಂಗಳೂರು, ಅಕ್ಟೋಬರ್ 06, 2021 (ಕರಾವಳಿ ಟೈಮ್ಸ್) : ಕಲಾ ಪ್ರಕಾರಗಳಲ್ಲಿ ಪ್ರಮುಖ ಒಂದು ಕಲಾ ಪ್ರಕಾರವಾಗಿ ಜಾದೂ ಆರ್ಥಾತ್ ಇಂದ್ರಜಾಲ ಕಲೆ. ತಮ್ಮ ವಿಶೇಷ ಕೈ ಚಳಕದಿಂದ ಜಾದೂಗಾರರು ವಿವಿಧ ಶೈಲಿಯ ಜಾದೂ ಪ್ರದರ್ಶನಗಳ ಮೂಲಕ ಜನರ ಮನಗೆದ್ದು ಮನಸ್ಸಂತೋಷ ನೀಡುವುದರ ಜೊತೆಗೆ ಜನರನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುತ್ತಾರೆ. 

ಇಂತಹ ಜಾದೂ ಪ್ರದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ನಿವಾಸಿ ಎಂ ಡಿ ಜಾದೂಗಾರ್ ನಾಮಾಂಕಿತ ವ್ಯಕ್ತಿ ಅಬ್ದುಲ್ ಖಾದರ್ ಅವರು ರಾಜ್ಯದ ವಿವಿಧೆಡೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೆರೆದ ವೇದಿಕೆಯಲ್ಲಿ ತಮ್ಮ ವಿಶೇಷ ಕೈಚಳಕದ ಮೂಲಕ ಜಾದೂ ಪ್ರದರ್ಶನ ನೀಡಿ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಮೂಕವಿಸ್ಮಿತರನ್ನಾಗಿಸಿದ ಖ್ಯಾತಿ ಪಡೆದಿದ್ದಾರೆ. 

ಮೂಲತಃ ಪುತ್ತೂರು ತಾಲೂಕಿನ ಕಾವು ನಿವಾಸಿಯಾಗಿರುವ ಇವರು 1990 ರಲ್ಲಿ ಈ ವಿಸ್ಮಯ ಜಗತ್ತಿನ ಪ್ರದರ್ಶನಕ್ಕೆ ಆರಂಭ ನೀಡಿ ಕಳೆದ 30 ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹಿತ ಇತರ ರಾಜ್ಯಗಳಾದ ಕೇರಳ, ತಮಿಳ್ನಾಡು, ಗೋವಾ ಮೊದಲಾದ ರಾಜ್ಯಗಳಲ್ಲೂ ಸಂಚರಿಸಿ ಸುಮಾರು 3 ಸಾವಿರಕ್ಕೂ ಮಿಕ್ಕಿದ ಪ್ರದರ್ಶನ ನೀಡಿ ತಮ್ಮ ವಿಶಿಷ್ಟ ಶೈಲಿಯ ಇಂದ್ರಜಾಲ ಕಲೆಯನ್ನು ಜನರ ಮುಂದಿಡುತ್ತಾ ಬಂದಿದ್ದಾರೆ. ಪ್ರಮುಖವಾಗಿ ರಾಜ್ಯದ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ನಿರಂತರವಾಗಿ ಜಾದೂ ಪ್ರದರ್ಶನ ನೀಡುತ್ತಾ ಬಂದಿರುವ ಇವರು ಹಲವಾರು ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹಲವು ವಿದ್ಯಾ ಸಂಸ್ಥೆಗಳಿಂದ ಪ್ರಶಂಸನಾ ಪತ್ರಗಳನ್ನು ಪಡೆದು ತಮ್ಮ ಕಲೆಗೆ ತಕ್ಕ ಪ್ರೋತ್ಸಾಹವನ್ನು ಪಡೆದುಕೊಂಡಿದ್ದರು. ಇವರು ಜಾದೂ ಪ್ರದರ್ಶನ ನೀಡುವುದರ ಜೊತೆಗೆ ಸ್ವತಃ ತಮ್ಮ ಕೈಚಳಕದಿಂದ ಹಲವು ಜಾದೂ ಸಾಮಾಗ್ರಿಗಳನ್ನು ತಯಾರಿಸಿ ಕಲಾಭಿಮಾನಿಗಳಿಗೆ ಒಪ್ಪಿಸಿದ್ದಾರೆ. 

ಇವರು ಪ್ರಮುಖವಾಗಿ ಗಾಳಿಯಲ್ಲಿ ಬರವಣಿಗೆ, ಖಾಲಿ ಪಾತ್ರೆಯಲ್ಲಿ ಚೆಂಡುಗಳು, ಹೂವುಗಳು, ನೋಟಿನ ಸರಣಿ, ಸೀರೆಗಳ ಮಾಯಾಜಾಲ, ತುಂಡಾದ ಹಗ್ಗಗಳ ಜೋಡಣೆ, ಕೊಡದಲ್ಲಿ ನೀರು ಖಾಲಿಯಾದಂತೆ ನೀರಿನ ಒರತೆ ಸೃಷ್ಟಿ, ವಿದ್ಯಾರ್ಥಿಗಳಿಂದ ಬೋರ್ ವೆಲ್, ಗಾಳಿಯಲ್ಲಿ ತೇಲುವ ಹುಡುಗ ಇವೇ ಮೊದಲಾದ ವಿಸ್ಮಯಭರಿತ ಜಾದೂಗಳನ್ನು ಪ್ರದರ್ಶಿಸಿ ವಿದ್ಯಾರ್ಥಿ ಸಮೂಹವನ್ನು ಹಾಗೂ ಸಾರ್ವಜನಿಕರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಮೂಲಕ ತಮ್ಮ ಅಮೋಘ ಕೈಚಳಕ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ತಮ್ಮ ವಿಶೇಷ ಕೈಚಳಕದಿಂದಾಗಿ ವಿವಿಧ ಕಲಾ ಪ್ರಕಾರಗಳ ಮೂಲಕ ಜನರನ್ನು ರಂಜಿಸಿ ಜನರ ಮನೋ ನೆಮ್ಮದಿಗೆ ಕಾರಣವಾಗುತ್ತಿರುವ ಇಂತಹ ಕಲಾಕಾರರನ್ನು ಸರಕಾರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಗುರುತಿಸಿ ಗೌರವಿಸಿ ಕಲೆಗೆ ಮನ್ನಣೆ ನೀಡುವ ಅಗತ್ಯ ಇದೆ. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಪುಳಕಿತಗೊಳಿಸಿದ್ದ ಎಂ.ಡಿ ಜಾದೂಗಾರ್ ಅವರಂತಹ ಜಾದೂಗಾರರ ಕಲೆಗೆ ಮನ್ನಣೆ ದೊರೆಯಬೇಕಾಗಿದೆ...... Rating: 5 Reviewed By: karavali Times
Scroll to Top