ಬಂಟ್ವಾಳ, ಅಕ್ಟೋಬರ್ 11, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ವರ್ಷ 3.40 ಲಕ್ಷ ರೂಪಾಯಿ ವೆಚ್ಚದಲ್ಲಿ ಉಚಿತ ಶೈತ್ಯಾಗಾರ ಕೊಡುಗೆ ನೀಡಿದ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಇದೀಗ ‘ಜಿಲ್ಲಾ ಕಮ್ಯೂನಿಟಿ ಇಂಪ್ಯಾಕ್ಟ್ ಗ್ರ್ಯಾಂಟ್ ಪ್ರಾಜೆಕ್ಟ್ ಯೋಜನೆಯಡಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರ ಒದಗಿಸಿದೆ ಎಂದು ಲಯನ್ಸ್ ಕ್ಲಬ್ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಡಾ. ಗೀತಪ್ರಕಾಶ್ ಹೇಳಿದ್ದಾರೆ.
ಬಿ ಸಿ ರೋಡಿನಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 12 ರಂದು ಮಂಗಳವಾರ ಬೆಳಿಗ್ಗೆ ಗಂಟೆ 10.30ಕ್ಕೆ ಶಾಸಕ ಯು ರಾಜೇಶ ನಾಯ್ಕ್ ಅವರು ಡಯಾಲಿಸಿಸ್ ಯಂತ್ರ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಬಿ ಸಿ ರೋಡು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸುವರು ಎಂದರು.
ಈ ಎರಡು ಡಯಾಲಿಸಿಸ್ ಯಂತ್ರ ಮತ್ತು ಗುಣಮಟ್ಟದ ಮೇಲುಸ್ತುವಾರಿ ಮಂಗಳೂರಿನ ಸಂಜೀವಿನಿ ಟ್ರಸ್ಟ್ ನಿರ್ವಹಿಸಲಿದ್ದು, ಬಡಜನರ ಅವಶ್ಯಕತೆಗೆ ಅನುಗುಣವಾಗಿ ಮತ್ತೆ 2 ಹೆಚ್ಚುವರಿ ಯಂತ್ರ ಒದಗಿಸಲು ಕ್ಲಬ್ ಸಿದ್ಧವಿರುವುದಾಗಿ ತಿಳಿಸಿದರು.
ಈಗಾಗಲೇ ಬಂಟ್ವಾಳ-ಜಕ್ರಿಬೆಟ್ಟು ಹೆದ್ದಾರಿ ಬದಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಹಣ್ಣಿನ ಗಿಡ ನೆಡಲಾಗಿದ್ದು, ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಕಳೆದ 25 ವರ್ಷಗಳಿಂದ ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಕೃತಕ ಕಾಲು ಜೋಡಣೆ ಸೇವೆ ನೀಡುತ್ತಿದೆ. ಈ ಜಿಲ್ಲೆಯ ಯುವ ಜನರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಳ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ 45 ಲಕ್ಷ ರೂಪಾಯಿ ವೆಚ್ಚದ ಸಂಚಾರಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಗವರ್ನರ್ ವಸಂತ ಕುಮಾರ್ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಪ್ರಾಂತೀಯ ಅಧ್ಯಕ್ಷ ಬಿ ಸಂಜೀವ ಶೆಟ್ಟಿ ಬಿ ಸಿ ರೋಡು, ಕಾರ್ಯದರ್ಶಿ ಮಧ್ವರಾಜ್ ಬಿ ಕಲ್ಮಾಡಿ ಉಪಸ್ಥಿತರಿದ್ದರು.
0 comments:
Post a Comment