ತಿರುವನಂತಪುರ, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯಾದ್ಯಂತ ಕಳೆದೆರಡು ದಿನಗಳಿಂದ ಮಹಾ ಮಳೆ ಸುರಿಯುತ್ತಿದ್ದು, ಅಕ್ಷರಶಃ ಜಲಪ್ರಳಯದ ಭೀತಿ ಪ್ರಾರಂಭವಾಗಿದೆ. ಜಲಪ್ರವಾಹದ ಜೊತೆಗೆ ಹಲವೆಡೆ ಭೂ ಕುಸಿತ ಉಂಟಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಾಜ್ಯದ ಕೊಟ್ಟಾಯಂ, ಇಡುಕ್ಕಿ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಕುಸಿದು ಆರು ಮಂದಿ ಸಾವನ್ನಪ್ಪಿದ್ದಾರೆ. ಇಡುಕ್ಕಿಯಲ್ಲಿ ಕಾರೊಂದು ಕೊಚ್ಚಿ ಹೋಗಿ ಮಹಿಳೆಯೊಬ್ಬರು ನೀರುಪಾಲಾಗಿದ್ದಾರೆ. 12ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಬಹುತೇಕ ಹೆದ್ದಾರಿಗಳು ಪೂರ್ಣ ನೀರಿನಿಂದ ಆವೃತವಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಬಸ್ಸು ಕಾರುಗಳನ್ನು ಮೇಲಕ್ಕೆ ಎಳೆದು, ಪ್ರಯಾಣಿಕರನ್ನು ರಕ್ಷಿಸಲಾಗಿದೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಲ್ಲಿ ಹಲವಾರು ವಾಹನಗಳು ನೀರು ಪಾಲಾಗಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹವಾಮಾನ ಇಲಾಖೆ ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಪಟ್ಟಣಂತಿಟ್ಟ, ತ್ರಿಶ್ಯೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರ, ವಯನಾಡ್ ಸೇರಿ ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಎರಡು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಪ್ರಕಟಿಸಿದೆ. ಬೆಟ್ಟಗುಡ್ಡಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಜಲಮಯವಾಗಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬ ಆಗುತ್ತಿದೆ. ಹೀಗಾಗಿ ಕೇರಳ ಸರಕಾರ, ಐಎಎಫ್ ನೆರವು ಕೋರಿದೆ. ಇದೀಗ ಹೆಲಿಕಾಪ್ಟರ್ ಗಳÀ ಮೂಲಕ ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಕ್ಟೋಬರ್ 19ರವರೆಗೆ ಶಬರಿಮಲೆ ಯಾತ್ರೆಗೆ ನಿಷೇಧ ಹೇರಲಾಗಿದೆ. ಸೋಮವಾರದಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಅಕ್ಟೋಬರ್ 20ಕ್ಕೆ ಮುಂದೂಡಲಾಗಿದೆ ಮತ್ತು ಕೇರಳ ಸ್ಥಿತಿ ಗಂಭೀರವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿದ್ದಾರೆ.
0 comments:
Post a Comment