ದುಬೈ, ಅಕ್ಟೋಬರ್ 25, 2021 (ಕರಾವಳಿ ಟೈಮ್ಸ್) : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಮೊದಲ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ದ ಭಾರತ ಹೀನಾಯ ಸೋಲುಂಡಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದೆ ಇದ್ದರೂ ಪಂದ್ಯದ ಬಳಿಕ ಭಾರತೀಯ ಆಟಗಾರರ ಕ್ರೀಡಾ ಸ್ಪೂರ್ತಿಯ ನಡವಳಿಕೆ ಮಾತ್ರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಕ್ರಿಕೆಟ್ ಎಂಬುದು ರಾಜಕೀಯಕ್ಕೂ, ಧರ್ಮಕ್ಕೂ ಮೀರಿದ್ದು ಎಂಬುದನ್ನು ಆಟಗಾರರ ನಡವಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು ಪಾಕ್ ಕ್ರಿಕೆಟಿಗರನ್ನು ಅಭಿನಂದಿಸಿ ಶುಭ ಹಾರೈಸಿರುವ ಸನ್ನಿವೇಶವನ್ನು ಐಸಿಸಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಶ್ಲಾಘನೆ ವ್ಯಕ್ತಪಡಿಸಿದೆ.
ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಭಾರೀ ನಿರೀಕ್ಷೆಗಳು ಎರಡೂ ತಂಡಗಳ ಅಭಿಮಾನಿಗಳಿಗೆ ಇರುತ್ತದೆ. ಅದೇ ರೀತಿ ಪಂದ್ಯದುಕ್ಕೂ ಭಾವೋದ್ವೇಗ, ಅತಿರೇಕದ ವರ್ತನೆಗಳೂ ಕಂಡು ಬರುತ್ತಿದೆ. ಕಾರಣ ಒಂದೇ ಕ್ರಿಕೆಟ್ ಇತಿಹಾಸದಲ್ಲಿ ಪರಸ್ಪರ ಬದ್ದ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ಎರಡೂ ತಂಡಗಳು ಒಂದಕ್ಕೊಂದು ಸೋಲೊಪ್ಪಿಕೊಳ್ಳಲು ತಯಾರಿರುವುದಿಲ್ಲ. ಯಾವುದೇ ತಂಡದ ವಿರುದ್ದ ಸೋತರೂ ಕ್ಷಣ ಮಾತ್ರದಲ್ಲಿ ಆ ಸೋಲು ಮನಸ್ಸಿನಿಂದ ಮಾಯವಾಗಿ ಬಿಡುತ್ತದೆ. ಆದರೆ ಬದ್ದ ಪ್ರತಿಸ್ಪರ್ಧಿಯ ವಿರುದ್ದದ ಸೋಲು ಅದು ಸುಲಭದಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಎಲ್ಲದ ಮಧ್ಯೆ ಕ್ರಿಕೆಟ್ ಮೈದಾನದಲ್ಲಿ ಎಲ್ಲರೂ ‘ಒಂದೇ’ ಎಲ್ಲರೂ ‘ಕ್ರಿಕೆಟಿಗರು’ ಎಂಬ ಮನೋಭಾವ ಬರಬೇಕು. ಸೋಲಿನ ಕಹಿಯಲ್ಲೂ ಎದುರಾಳಿ ತಂಡವನ್ನು ಅಭಿನಂಧಿಸಬಲ್ಲ ಕ್ರೀಡಾ ಮನೋಭಾವ ಪ್ರದರ್ಶಿಸುವ ಗುಣ ಇರಬೇಕು. ಆ ಸ್ಪೂರ್ತಿಯನ್ನು ಟೀಂ ಇಂಡಿಯಾ ಭಾನುವಾರ ಪ್ರದರ್ಶಿಸಿದೆ.
ಟಿ-20 ವಿಶ್ವಕಪ್ ಪಂದ್ಯಾವಳಿಯ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟೀಂ ಇಂಡಿಯಾ ವಿರುದ್ಧ 10 ವಿಕೆಟ್ ಜಯ ಸಾಧಿಸುವ ಮೂಲಕ ಕ್ರಿಕೆಟ್ ಇತಿಹಾಸ ಬದಲಿಸಿದೆ. ಆದರೆ ಇತ್ತ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ನಿರಾಶರಾಗಿದ್ದು, ಹಲವರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆದರೆ ಪಂದ್ಯದ ನಂತರ ಮೈದಾನದಲ್ಲಿನ ಕೆಲವು ದೃಶ್ಯಗಳು ಕ್ರೀಡಾಭಿಮಾನಿಗಳನ್ನು ಆಕರ್ಷಿಸಿದೆ. ಪಾಕ್ ಆಟಗಾರರಾದ ಇಮಾದ್ ವಾಸಿಂ, ಶೋಯೆಬ್ ಮಲಿಕ್ ಸೇರಿದಂತೆ ಹಲವರು ಟೀಂ ಇಂಡಿಯಾ ಮಾರ್ಗದರ್ಶಕ ಎಂ ಎಸ್ ಧೋನಿ ಅವರೊಂದಿಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಮಿಸ್ಟರ್ ಕೂಲ್ ಕಡೆಯಿಂದ ಸಲಹೆ, ಸೂಚನೆ ಪಡೆದುಕೊಳ್ಳಲು ಉತ್ಸುಕತೆ ತೋರಿದರು. ಪಾಕ್ ನಾಯಕ ಬಾಬರ್ ಅಝಂ ಆಗಮಿಸಿ ಧೋನಿಗೆ ಹಸ್ತಲಾಘವ ಮಾಡಿದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಂದ್ಯದ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮುಗುಳ್ನಗುತ್ತಾ ಪಾಕಿಸ್ತಾನಿ ಆಟಗಾರರಿಗೆ ಶುಭ ಹಾರೈಸಿದರು. ಈ ನಡವಳಿಕೆ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಕ್ರಿಕೆಟ್ ಕ್ರೀಡೆಯ ನಿಜವಾದ ಗೆಲುವು. ಈ ದೃಶ್ಯಗಳು ಎಷ್ಟು ಸುಂದರವಾಗಿವೆ ಎಂಬ ಕಮೆಂಟ್‍ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
0 comments:
Post a Comment