ದುಬೈ, ಅಕ್ಟೋಬರ್ 16, 2021 (ಕರಾವಳಿ ಟೈಮ್ಸ್) : ದುಬೈ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್-2021 ರ ಅಂತಿಮ ಹಣಾಹಣಿಯಲ್ಲಿ 27 ರನ್ ಗಳಿಂದ ಕೊಲ್ಕೊತ್ತಾ ತಂಡವನ್ನು ಹಿಮ್ಮೆಟ್ಟಿಸಿದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು.
ಕಳೆದ ಬಾರಿಯ ಐಪಿಎಲ್ ಕೂಟದಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಧೋನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
193 ರನ್‍ಗಳ ಕಠಿಣ ಗುರಿ ಪಡೆದ ಕೋಲ್ಕತ್ತಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ 27 ರನ್ ಗಳಿಂದ ಧೋನಿ ಸೈನ್ಯಕ್ಕೆ ಶರಣಾಯಿತು. 2010, 2011, 2018 ರ ಬಳಿಕ ಇದೀಗ ಮತ್ತೆ 2021 ರ ಐಪಿಎಲ್ ಚಾಂಪಿಯನ್ ಪಟ್ಟವನ್ನು ಚೆನ್ನೈ ಅಲಂಕರಿಸಿದೆ.
193 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಲ್ಲಿ ಅಬ್ಬರದ ಆಟ ಪ್ರದರ್ಶಿಸಿ ಪಂದ್ಯ ಗೆಲ್ಲುವ ಸೂಚನೆ ನೀಡಿತ್ತು. ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಚೆನ್ನೈ ಬೌಲರ್‌ಗಳ ಬೆವರಿಳಿಸಿ ಮೊದಲ ವಿಕೆಟ್‍ಗೆ 64 ಎಸೆತಗಳಲ್ಲೇ 91 ರನ್ ಗಳ ಜೊತೆಯಾಟವಾಡಿದರು. ಧೋನಿ ಕೈಚೆಲ್ಲಿದ 2 ಕ್ಯಾಚ್‍ಗಳ ಲಾಭ ಪಡೆದ ಅಯ್ಯರ್ 50 ರನ್ (32 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ಬಳಿಕ ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್‍ಗೆ ಬಲಿಯಾದರು. ಶುಭಮನ್ ಗಿಲ್ 51 ರನ್ (43 ಎಸೆತ, 6 ಬೌಂಡರಿ) ಬಾರಿಸಿ ಔಟಾದರು.
ಬಳಿಕ ಕೊಲ್ಕೊತ್ತಾ ಮಧ್ಯಮ ಕ್ರಮಾಂಕದಲ್ಲಿ ಹಠಾತ್ ಕುಸಿತ ಅನುಭವಿಸಿ ನಾಟಕೀಯ ಪತನಕ್ಕೀಡಾಗಿ ಗೆಲ್ಲುವ ಪಂದ್ಯವನ್ನು ಸುಲಭದಲ್ಲಿ ಕೈಚೆಲ್ಲಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ವಾಡ್-ಫಾಫ್ ಡು ಪ್ಲೆಸಿಸ್ ಜೊಡಿ ಮೊದಲ ವಿಕೆಟ್‍ಗೆ 50 ಎಸೆತಗಳಲ್ಲಿ 61 ರನ್ ಗಳ ಜೊತೆಯಾಟವಾಡಿದರು. ಗಾಯಕ್ವಾಡ್ 32 ರನ್ (27 ಎಸೆತ 3 ಬೌಂಡರಿ, 1 ಸಿಕ್ಸ್) ಸಿಡಿಸಿ ಸುನಿಲ್ ನರೈನ್ ಅವರಿಗೆ ವಿಕೆಟ್ ಒಪ್ಪಿಸಿದರು. ರಾಬಿನ್ ಉತ್ತಪ್ಪ (31 ರನ್, 15 ಎಸೆತ, 3 ಸಿಕ್ಸ್) ಬಾರಿಸಿ ಔಟ್ ಆದರೆ, 3ನೇ ವಿಕೆಟ್ ಗೆ ಜೊತೆಯಾದ ಮೊಯಿನ್ ಅಲಿ ಮತ್ತು ಡು ಪ್ಲೆಸಿಸ್ ಜೋಡಿ 39 ಎಸೆತಗಳಲ್ಲಿ 68 ರನ್ ಭಾರಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿತು.
ಆರಂಭಿಕ ಡು ಪ್ಲೆಸಿಸ್ 86 ರನ್ (59 ಎಸೆತ, 7 ಬೌಂಡರಿ, 3 ಸಿಕ್ಸ್) ಸಿಡಿಸಿ ಕೊನೆಯಲ್ಲಿ ಔಟಾದರು. ಮೊಯಿನ್ ಅಲಿ ಅಜೇಯ 37 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸ್) ಭಾರಿಸಿದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿತು. ಕೋಲ್ಕತ್ತಾ ಪರ ಸುನೀಲ್ ನರೈನ್ 2 ವಿಕೆಟ್ ಪಡೆದರೆ, ಶಿವಂ ಮಾವಿ 1 ವಿಕೆಟ್ ಕಿತ್ತರು.
0 comments:
Post a Comment