ದುಬೈ, ಅಕ್ಟೋಬರ್ 14, 2021 (ಕರಾವಳಿ ಟೈಮ್ಸ್) : ಮತ್ತೊಂದು ಲೋ ಸ್ಕೋರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ವಿರುದ್ದ ಅಂತಿಮ ಕ್ಷಣದಲ್ಲಿ ವಿರೋಚಿತ ಸೋಲು ಕಾಣುವ ಮೂಲಕ ಐಪಿಎಲ್ ಟೂರ್ನಿಯಿಂದ ಹೊರಬಿತ್ತು.
ಇಲ್ಲಿನ ಕ್ರೀಡಾಂಗಣದಲ್ಲಿ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ ಕೆಕೆಆರ್ ತಂಡ ಡೆಲ್ಲಿ ವಿರುದ್ಧ ಜಯ ಸಾಧಿಸಿ ಐಪಿಎಲ್ 14ನೇ ಅವೃತ್ತಿಯ ಫೈನಲ್ ಹಂತ ತಲುಪಿದೆ. ಈ ಮೂಲಕ ಕೋಲ್ಕತ್ತಾ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದಂತಾಗಿದೆ. ಈಗಾಗಲೇ 9 ನೇ ಬಾರಿಗೆ ಫೈನಲ್ ಪ್ರವೇಶಿಸಿದ ಚೆನ್ನೈ ವಿರುದ್ದ ಶುಕ್ರವಾರ ಟ್ರೋಫಿ ನಿರ್ಣಾಯಕ ಪಂದ್ಯ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗೆಲುವಿಗೆ 136 ರನ್ ಗುರಿ ಪಡೆದ ಕೋಲ್ಕತ್ತಾ ತಂಡಕ್ಕೆ ಆರಂಭಿಕ ಜೋಡಿ 96 ರನ್ (74 ಎಸೆತ) ಜೊತೆಯಾಟ ನಡೆಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಕೊನೆಯಲ್ಲಿ ನಡೆದ ನಾಟಕೀಯ ಕುಸಿತ ಕಾರಣದಿಂದ ಪಂದ್ಯ ರೋಚಕತೆಯತ್ತ ಸಾಗಿ ಕೊನೆಗೂ ಕೋಲ್ಕತ್ತಾ ತಂಡ 19. 5 ಓವರ್ ಗಳಲ್ಲಿ 136 ರನ್ ಸಿಡಿಸಿ ಜಯ ಗಳಿಸಿತು.
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 55 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದರು. ಶುಭಮನ್ ಗಿಲ್ ಕಡೆಯವರೆಗೆ ಹೋರಾಡಿ 46 ರನ್ (46 ಎಸೆತ, 1 ಬೌಂಡರಿ 1 ಸಿಕ್ಸ್) ಸಿಡಿಸಿ ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರು.
ಅಂತಿಮ ಓವರ್ ನಲ್ಲಿ ಕೆಕೆಆರ್ ಜಯಕ್ಕೆ 7 ರನ್ ಅವಶ್ಯಕತೆ ಇತ್ತು. ಆರ್ ಅಶ್ವಿನ್ ಎಸೆದ ಓವರ್ ನ ಮೊದಲ ಎಸೆತ ತ್ರಿಪಾಠಿ ಒಂದು ರನ್ ತೆಗೆದರೆ, 2ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 3ನೇ ಎಸೆತದಲ್ಲಿ ಶಕೀಬ್ ಔಟ್ ಆದರೆ, 4 ನೇ ಎಸೆತದಲ್ಲಿ ನರೈನ್ ಔಟ್. ಕೊನೆಯ 2 ಎಸೆತದಲ್ಲಿ 6 ರನ್ ಅವಶ್ಯಕತೆ ಇತ್ತು. ಪಂದ್ಯ ರೋಚಕ ಘಟ್ಟದಲ್ಲಿತ್ತು. 5ನೇ ಎಸೆತವನ್ನು ರಾಹುಲ್ ತ್ರಿಪಾಠಿ 5ನೇ ಸಿಕ್ಸರ್ ಆಗಿ ಮಾರ್ಪಡಿಸುವ ಮೂಲಕ ಕೆಕೆಆರ್ ತಂಡವನ್ನು ರೋಚಕ ಜಯದೊಂದಿಗೆ ಫೈನಲ್ ಹಂತಕ್ಕೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 18 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್), ಶಿಖರ್ ಧವನ್ 36 ರನ್ (39 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಶ್ರೇಯಸ್ ಅಯ್ಯರ್ ಸ್ಪಲ್ಪ ಮಟ್ಟಿನ ಚೇತರಿಕೆ ನೀಡಿದರೂ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಕೋಲ್ಕತ್ತಾ ಬೌಲರ್ ಗಳು ಬಿಡಲಿಲ್ಲ. ಸ್ಟೋಯ್ನಿಸ್ 18 ರನ್ (23 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ ಅಜೇಯ 30 ರನ್ (27 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಶಿಮ್ರಾನ್ ಹೆಟ್ಮಾಯೆರ್ 17 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ 130 ಗಡಿದಾಟಿತು. ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಡೆಲ್ಲಿ ತಂಡ 135 ರನ್ ಕಲೆ ಹಾಕಿತು. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತರೆ, ಲೂಕಿ ಫಗ್ರ್ಯೂಸನ್ ಮತ್ತು ಶಿವಂ ಮಾವಿ ತಲಾ 1 ವಿಕೆಟ್ ಪಡೆದರು.
0 comments:
Post a Comment