ಬಂಟ್ವಾಳ ಪತ್ರಿಕಾ ಲೋಕದ ದಿಗ್ಗಜ ಫಾರೂಕ್ ಗೂಡಿನಬಳಿ ಅವರ ಅಕಾಲಿಕ ಅಗಲಿಕೆಗೆ ಅಕ್ಷರ ಸಂತಾಪ - Karavali Times ಬಂಟ್ವಾಳ ಪತ್ರಿಕಾ ಲೋಕದ ದಿಗ್ಗಜ ಫಾರೂಕ್ ಗೂಡಿನಬಳಿ ಅವರ ಅಕಾಲಿಕ ಅಗಲಿಕೆಗೆ ಅಕ್ಷರ ಸಂತಾಪ - Karavali Times

728x90

1 October 2021

ಬಂಟ್ವಾಳ ಪತ್ರಿಕಾ ಲೋಕದ ದಿಗ್ಗಜ ಫಾರೂಕ್ ಗೂಡಿನಬಳಿ ಅವರ ಅಕಾಲಿಕ ಅಗಲಿಕೆಗೆ ಅಕ್ಷರ ಸಂತಾಪ


ಬಂಟ್ವಾಳ ತಾಲೂಕು ಕೇಂದ್ರೀಕರಿಸಿಕೊಂಡು ಕಳೆದ ಹಲವು ವರ್ಷಗಳಿಂದ ಪತ್ರಿಕಾ ರಂಗ ಹಾಗೂ ತರೆಬೇತುದಾರರಾಗಿ ವಿಶಿಷ್ಟ ಸೇವೆ ಸಲ್ಲಿಸಿದ, ಕರ್ನಾಟಕ ಪತ್ರಕರ್ತರ ಸಂಘ (ಕೆಜೆಯು) ಇದರ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಫಾರೂಕ್ ಗೂಡಿನಬಳಿ ಅವರು ಇನ್ನು ನಮ್ಮೊಂದಿಗಿಲ್ಲ.......

ಬಂಟ್ವಾಳ ತಾಲೂಕಿನ, ಗೂಡಿನಬಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಫಾರೂಕ್ ಅವರು ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ, ಪಂಚಾಯತ್ ರಾಜ್ ಶಿಕ್ಷಣ ತರಬೇತುದಾರರಾಗಿ, ಕಾನೂನು ಸ್ವಯಂ ಸೇವಕರಾಗಿ, ಮಗು, ಮಾಹಿತಿ ಹಕ್ಕು, ವ್ಯಕ್ತಿತ್ವ ವಿಕಸನ ಮೊದಲಾದ ಕ್ಷೇತ್ರಗಳಲ್ಲಿ ಕಳೆದ ಹಲವು ವರ್ಷಗಳಿಂದ ತರಬೇತುದಾರರಾಗಿ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಚಾಲಕರಾಗಿ ಸೇವೆಯನ್ನು ಸಲ್ಲಿಸಿದ್ದರು. 

ಸರ್ವ ಶಿಕ್ಷಾ ಅಭಿಯಾನದ ಶೈಕ್ಷಣಿಕ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಕುಟುಂಬಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ-ಗತಿಗಳ ಅದ್ಯಯನ, ಮಾಹಿತಿ ಹಕ್ಕು ಕಾಯಿದೆ-2005 ಇದರ ಪರಿಣಾಮಕಾರಿ ಅನುಷ್ಠಾನ, ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯಿದೆಯ ಸಾಧಕ-ಬಾಧಕಗಳ ಸಮೀಕ್ಷಾ ತಂಡದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು, ತರಬೇತು ಸಂಯೋಜನೆ ಹಾಗೂ ವಿನ್ಯಾಸಗಳ ಸಲಹಾ ಹಾಗೂ ವ್ಯವಸ್ಥಾಪನಾ ಸಮಿತಿಗಳ ಸದಸ್ಯರಾಗಿಯೂ ಅಧ್ಯಯನ ಸಮೀಕ್ಷೆಗಳನ್ನು ಕೈಗೊಂಡಿರುವ ಇವರ ಕಾರ್ಯಕ್ಷೇತ್ರ ಬಹಳಷ್ಟು ವಿಸ್ತಾರವಾಗಿದೆ. ನಾಡಿದ ವಿವಿಧ ಪತ್ರಿಕೆಗಳಲ್ಲಿ ಬಿಡಿ ವರದಿಗಾರರಾಗಿ, ಜಿಲ್ಲಾ ವರದಿಗಾರರಾಗಿ, ಉಪ ಸಂಪಾದಕರಾಗಿ ಪತ್ರಿಕಾ ರಂಗದಲ್ಲೂ ಸಾಕಷ್ಟು ಪಳಗಿರುವ ಫಾರೂಕ್ ಗೂಡಿನಬಳಿ ತೆರೆಯ ಮರೆಯಲ್ಲೇ ಇದ್ದುಕೊಂಡು ಎಲೆಮರೆ ಕಾಯಿಯಂತೆ ಪಾದರಸ ಚಲನೆಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವ ಫಾರೂಕ್ ಓರ್ವ ಅಪ್ರತಿಮ ಸಾಧಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. 

ಕವಿ, ಸಾಹಿತಿಯಾಗಿ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕವನ ವಾಚನ, ಸಾಹಿತ್ಯ-ವಿಚಾರ ಮಂಡನೆ, ಚರ್ಚಾಗೋಷ್ಠಿ, ಕಾರ್ಯಕ್ರಮ ನಿರೂಪಣೆ ಮೊದಲಾದ ಸಾಹಿತ್ಯಿಕ ರಂಗಗಳಲ್ಲೂ ತೊಡಗಿಸಿಕೊಂಡು ಹಲವು ಹಿರಿಯ ಸಾಹಿತ್ಯ ದಿಗ್ಗಜರ ಹತ್ತಿರದ ನಂಟು ಇಟ್ಟುಕೊಂಡಿದ್ದರು. 

ಕಳೆದ ಕೆಲ ಸಮಯಗಳಿಂದ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಮನೆಯೊಳಗೆ ವಿಶ್ರಾಂತಿಗೆ ಸೇರಿದ್ದ ಫಾರೂಕ್ ಗೂಡಿನಬಳಿ ಮತ್ತೆ ಆರೋಗ್ಯಯುತ ಬದುಕಿಗೆ ಮರಳದೆ ಅಕ್ಟೋಬರ್ 1 ರ ಶುಕ್ರವಾರ ಸಂಜೆ ತಾಯಿ, ಪತ್ನಿ, ಓರ್ವ ಎಳೆ ಪ್ರಾಯದ ಹೆಣ್ಣು ಕಂದಮ್ಮ, ಅಪಾರ ಬಂಧು-ಬಳಗ ಸಹಿತ ನಮ್ಮನ್ನೆಲ್ಲ ಬಿಟ್ಟು ಎಂದೆಂದೂ ಮರಳಿ ಬಾರದ ಲೋಕಕ್ಕೆ ಯಾತ್ರೆಗೈದರು. ಸರ್ವಶಕ್ತನಾದ ಅಲ್ಲಾಹು ಅವರ ಬರ್ಝಖೀ ಜೀವನವನ್ನು ಸಂತೋಷಮಯಗೊಳಿಸಲಿ..... ಅವರ ಅಗಲಿಕೆಯ ಮನಸ್ಸಿನ ಭಾರವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಬಂಧು-ಮಿತ್ರರಿಗೆ, ಸಹೋದ್ಯೋಗಿಗಳಿಗೆ ಭಗವಂತ ಕರುಣಿಸಲಿ ಎಂಬ ಅಂತರಾಳದ ಪ್ರಾರ್ಥನೆಯೊಂದಿಗೆ..................

- ಪಿ.ಎಂ.ಎ. ಪಾಣೆಮಂಗಳೂರು

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪತ್ರಿಕಾ ಲೋಕದ ದಿಗ್ಗಜ ಫಾರೂಕ್ ಗೂಡಿನಬಳಿ ಅವರ ಅಕಾಲಿಕ ಅಗಲಿಕೆಗೆ ಅಕ್ಷರ ಸಂತಾಪ Rating: 5 Reviewed By: karavali Times
Scroll to Top