ಮಂಗಳೂರು, ನವೆಂಬರ್ 01, 2021 (ಕರಾವಳಿ ಟೈಮ್ಸ್) : ಒಂದೆಡೆ ಜಾತಿ-ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ. ಇದರಿಂದಾಗಿ ಹಿಂದುತ್ವ ಸರ್ವಾಧಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು ಸಿಪಿಐಎಂ ದ ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯ ಪಟ್ಟರು.
ಕೂಳೂರಿನಲ್ಲಿ ನಡೆದ ಸಿಪಿಐಎಂ ಮಂಗಳೂರು ನಗರ ಉತ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಪ್ರಧಾನಿಯೇ ದಿನಬೆಳಗಾದರೆ ಹಸಿ ಹಸಿ ಸುಳ್ಳನ್ನು ಹೇಳುತ್ತಾ, ಜನತೆಯಲ್ಲಿ ಭ್ರಮೆಯನ್ನು ಸ್ರಷ್ಟಿಸುತ್ತಿದ್ದಾರೆ. ದೇಶದ ಆರ್ಥಿಕತೆಯನ್ನೇ ಸರ್ವನಾಶ ನಾಡಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ ನರೇಂದ್ರ ಮೋದಿ ಸರಕಾರವನ್ನು ಅತ್ಯಂತ ಶೀಘ್ರದಲ್ಲಿ ಕಿತ್ತೆಸೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಕಾರ್ಪೋರೇಟರ್, ಸಿಪಿಐಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಜ್ಜೆ ಹೆಜ್ಜೆಗೂ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ಅದರ ವಿರುದ್ದ ಪ್ರಬಲ ಜನ ಚಳುವಳಿಯು ಬೆಳೆದು ಬರಬೇಕಾಗಿದೆ. ಕಾರ್ಮಿಕ ವರ್ಗದ ಹಾಗೂ ರೈತಾಪಿ ಜನತೆಯ ಐಕ್ಯ ಚಳುವಳಿ ಮಾತ್ರವೇ ದೇಶಕ್ಕೆ ಆಶಾಕಿರಣ ಎಂದರು.
ಇದೇ ವೇಳೆ ಕಳೆದ ಹಲವು ವರ್ಷಗಳಿಂದ ದುಡಿಯುವ ವರ್ಗದ ಚಳುವಳಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಪಕ್ಷದ ಹಿರಿಯ ಸದಸ್ಯರಾದ ತುಕಾರಾಮ ಕೊಂಚಾಡಿ, ನಾರಾಯಣ ಕೊಂಚಾಡಿ, ಸುಕುಮಾರ್ ಮಾಲೆಮಾರ್ ಅವರನ್ನು ಗೌರವಿಸಲಾಯಿತು.
ಪಕ್ಷದ ಹಿರಿಯ ಸದಸ್ಯ ನಾರಾಯಣ ಕೊಂಚಾಡಿ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಸಿಪಿಐಎಂ ಮಂಗಳೂರು ನಗರ ಉತ್ತರ ಸಮಿತಿ ನಾಯಕರಾದ ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ಬಿ.ಕೆ.ಇಂತಿಯಾಝ್, ರವಿಚಂದ್ರ ಕೊಂಚಾಡಿ, ನವೀನ್ ಕೊಂಚಾಡಿ, ಸಮ್ಮೇಳನದ ಸ್ವಾಗತ ಸಮಿತಿ ಮುಖಂಡರಾದ ಅಹಮ್ಮದ್ ಬಶೀರ್, ಅನಿಲ್ ಡಿಸೋಜ, ಮುಸ್ತಾಫ, ಶೆರೀಫ್ ಮೊದಲಾದವರು ಭಾಗವಹಿಸಿದ್ದರು.
ಅಹಮ್ಮದ್ ಬಶೀರ್ ಸ್ವಾಗತಿಸಿ, ಸಂತೋಷ್ ಡಿಸೋಜ ವಂದಿಸಿದರು.
0 comments:
Post a Comment