ಬಂಟ್ವಾಳ, ಅಕ್ಟೋಬರ್ 10, 2021 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಾಲಕಿಯನ್ನು ನಂಬಿಸಿ ಮಂಗಳೂರಿಗೆ ಕರೆಸಿ ಲಾಡ್ಜಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದ ಒಟ್ಟು ನಾಲ್ಕೂ ಮಂದಿ ಆರೋಪಿಗಳನ್ನೂ ಬಂಧಿಸಿ ತನಿಖೆ ಮುಗಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.
ಭಾನುವಾರ ಬಂಟ್ವಾಳ ಎಎಸ್ಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎಡಿಶನಲ್ ಎಸ್ಪಿ ಡಾ ಶಿವಕುಮಾರ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರ ನೇತೃತ್ವದಲ್ಲಿ ಬಂಟ್ವಾಳ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಗೌಡ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಪ್ರಸನ್ನ ಅವರ ಬಾಲಕಿಯ ದೂರಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೇರೆ ಬೇರೆ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಬಳಿಕ ಪ್ರಕರಣದ ಒಟ್ಟು ಚಿತ್ರಣ ಬಯಲಿಗೆಳೆಯಲಾಗಿದೆ ಎಂದರು.
ಶುಕ್ರವಾರ ಬೆಳಗ್ಗೆ ತಾನು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಳಿ ಕಾರಿನಲ್ಲಿ ಬಂದ ತಂಡವೊಂದು ನನ್ನನ್ನು ಅಪಹರಣ ಮಾಡಿ ಅಜ್ಞಾತ ಸ್ಥಳದಲ್ಲಿ ಅತ್ಯಾಚಾರ ನಡೆಸಿದೆ ಎಂದು ಬಾಲಕಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಳು. ಬಾಲಕಿಯ ದೂರಿನಂತೆ ಪ್ರಕರಣ ದಾಖಲಿಸಿದ ಬಂಟ್ವಾಳ ಪೆÇಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದೊಂದು ಅಪಹರಣ ಪ್ರಕರಣ ಅಲ್ಲ. ಪರಿಚಿತನಿಂದಲೇ ಅಪ್ರಾಪ್ತೆಯ ಮುಗ್ದತೆ ಬಂಡವಾಳವಾಗಿಸಿ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣ ಎಂಬುದು ಬಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಸಂದರ್ಭ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ಬಂಟ್ವಾಳ ಪೊಲೀಸ್ ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಬಂಟ್ವಾಳ ನಗರ ಪಿಎಸ್ಸೈ ಅವಿನಾಶ್, ಗ್ರಾಮಾಂತರ ಪಿಎಸ್ಸೈ ಪ್ರಸನ್ನ ಜೊತೆಗಿದ್ದರು. ಜಿಲ್ಲೆಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಅಪ್ರಾಪ್ತೆಯ ಗ್ಯಾಂಗ್ ರೇಪ್ ಪ್ರಕರಣವನ್ನು 24 ಗಂಟೆಯೊಳಗೆ ಭೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾದ ಪೊಲೀಸ್ ಟೀಂಗೆ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಹ್ಯಾಟ್ಸಪ್ ಎಂದಿದ್ದಾರೆ.
0 comments:
Post a Comment