ಬಂಟ್ವಾಳ, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ನಿರ್ಮಾಣ ಕಾಮಗಾರಿ ಹಿನ್ನಲೆಯಲ್ಲಿ ಕಲ್ಲಡ್ಕ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಾಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಲ್ಲಿನ ರಸ್ತೆ ಬದಿಯ ಹೆದ್ದಾರಿ ಅಗಲೀಕರಣಕ್ಕೆ ಗುರುತಿಸಲಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಕಲ್ಲಡ್ಕ ಪೇಟೆಯ ಬಹುತೇಕ ಹಳೆಯ ಹಾಗೂ ಇತಿಹಾಸ ಪ್ರಸಿದ್ದ ಕಟ್ಟಡಗಳು, ಅಂಗಡಿಗಳು ನೆಲಸಮಗೊಂಡಿದೆ. ಬಿ ಸಿ ರೋಡು-ಅಡ್ಡಹೊಳೆ ನಡುವೆ 64 ಕಿ ಮೀ ಚತುಷ್ಪಥ ಹೆದ್ದಾರಿ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದ್ದು, ಕಾಮಗಾರಿ ಆರಂಭಕ್ಕೆ ಪೂರ್ವಭಾವಿ ಪ್ರಕ್ರಿಯೆಗಳು ಇದೀಗ ಆರಂಭಗೊಂಡಿದೆ. ಕಲ್ಲಡ್ಕದಿಂದ ಮೆಲ್ಕಾರ್‍ವರೆಗೂ ಈ ಅಗಲೀಕರಣ ಕಾಮಗಾರಿ ಪ್ರಕ್ರಿಯೆ ಸಾಗಲಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ಹಾಗೂ ಪೆರಿಯಶಾಂತಿಯಿಂದ ಬಿ ಸಿ ರೋಡುವರೆಗೆ ಎರಡು ಹಂತದಲ್ಲಿ ಈ ಕಾಮಗಾರಿ ನಡೆಯಲಿದೆ.
ಕಲ್ಲಡ್ಕ ಪೇಟೆಯಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಇದಕ್ಕಾಗಿ ಈಗಾಗಲೇ ಪೇಟೆಯ ತೆರವುಗೊಳ್ಳಲಿರುವ ಅಂಗಡಿ, ಕಟ್ಟಡಗಳನ್ನು ಗುರುತಿಸಲಾಗಿದ್ದು, ಅದೆಲ್ಲದರ ತೆರವು ಕಾರ್ಯ ಆರಂಭಗೊಂಡಿದೆ. ತೆರವುಗೊಳ್ಳುವ ಕೆಲ ಕಟ್ಟಡಗಳು ಅದರ ಹಿಂಭಾಗದಲ್ಲಿಯೇ ನೂತನ ಶೈಲಿಯಲ್ಲಿ ಪುನರ್ ನಿರ್ಮಾಣಗೊಂಡರೆ ಇನ್ನು ಕೆಲವು ಬೇರೆಡೆಗೆ ಸ್ಥಳಾಂತರಗೊಂಡು ಪುನರಾರಂಭಗೊಳ್ಳಲಿದೆ ಎನ್ನಲಾಗಿದೆ.
ಕಲ್ಲಡ್ಕ ಪೇಟೆಯಲ್ಲಿ ಹಲವು ವರ್ಷಗಳಿಂದ ಹೆಸರುಗಳಿಸಿದ್ದ ಹಳೆಯ ಕೆಟಿ ಹೋಟೆಲ್, ಶಿಲ್ಪಾ ಗೊಂಬೆ ಬಳಗದ ಕಚೇರಿ, ಕೆಲ ಧಾರ್ಮಿಕ ಸ್ಥಳಗಳು, ಸೋಜಾ ರೆಡಿಮೇಡ್ ಹಾಗೂ ಮೆಟಲ್ ಮಳಿಗೆ, ವಿಜಯಾ ಬ್ಯಾಂಕ್ ಶಾಖೆ, ರೈಸ್ ಮಿಲ್ ಮೊದಲಾದವುಗಳು ತೆರವುಗೊಳ್ಳುವ ಪಟ್ಟಿಯಲ್ಲಿ ಸೇರಿಕೊಂಡಿದೆ.
0 comments:
Post a Comment