ಬಂಟ್ವಾಳ, ಸೆಪ್ಟೆಂಬರ್ 05, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಬಳಿ ರೈಲು ಹಳಿ ಜೋಡಿಸುವ ಕ್ಲಿಪ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕಿಡಿಗೇಡಿಗಳು ರೈಲ್ವೆ ಹಳಿಯನ್ನು ಜೋಡಿಸುವ ಎಂಟು ಆಕಾರದ ಕ್ಲಿಪ್ ಗಳನ್ನು ಕದಿಯುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಕ್ಲಿಪ್‍ಗಳು ರೈಲ್ವೆ ಹಳಿಗಳನ್ನು ಜೋಡಿಸುವ ಸಾಧನವಾಗಿದ್ದು, ಇದನ್ನು ಬಿಡಿಸಿ ಕಳವುಗೈಯುತ್ತಿರುವುದರಿಂದ ರೈಲ್ವೆ ಹಳಿ ಸಡಿಲಗೊಂಡು ರೈಲು ಹಳಿ ತಪ್ಪುವಂತಹ ಗಂಭೀರ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ರೈಲ್ವೆ ಪೊಲೀಸರು ಮಫ್ತಿಯಲ್ಲಿ ಕಳವುಗೈಯುತ್ತಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದರು.
ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಆರೋಪಿಗಳು ಕ್ಲಿಪ್ ಕದಿಯುತ್ತಿದ್ದ ಬಗ್ಗೆ ನೋಡಿದ ಸ್ಥಳೀಯರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ಸಂದರ್ಭ ಮಫ್ತಿಯಲ್ಲಿದ್ದ ರೈಲ್ವೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಟಾಟಾ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಸಕಲೇಶಪುರ ರೈಲ್ವೆ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಭೀರ ಅಪರಾಧ ಪ್ರಕರಣವಾಗಿರುವುದರಿಂದ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಡ್ಡಿದ್ದಾರೆ.
0 comments:
Post a Comment