ಬಂಟ್ವಾಳ, ಸೆಪ್ಟಂಬರ್ 16, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ವಾಹನದ ಮೂಲಕ ತಂದು ತ್ಯಾಜ್ಯ ಎಸೆದ ಬಂಟ್ವಾಳದ ವ್ಯಕ್ತಿಗೆ ಪುದು ಪಂಚಾಯತ್ ಬರೋಬ್ಬರಿ 3 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಬೇಕಾಬಿಟ್ಟಿ ತ್ಯಾಜ್ಯ ಎಸೆದು ಪರಿಸರ ಮಲಿನಗೊಳಿಸುವ ಕಿಡಿಗೇಡಿಗಳಿಗೆ ಖಡಕ್ ಸಂದೇಶ ರವಾನಿಸಿದೆ.
ಬಂಟ್ವಾಳ-ಬೈಪಾಸಿನಲ್ಲಿ ಅಂಗಡಿ ಹೊಂದಿರುವ ವ್ಯಕ್ತಿ ಇತ್ತೀಚಿಗೆ ತನ್ನ ಮಾರುತಿ ಓಮ್ನಿ ಕಾರಿನಲ್ಲಿ ತ್ಯಾಜ್ಯ ತುಂಬಿದ ಕಟ್ಟುಗಳನ್ನು ತಂದು ಪುದು ಗ್ರಾಮದ ಹತ್ತನೇ ಮೈಲುಕಲ್ಲು ಬಳಿ ಹೆದ್ದಾರಿಗೆ ಎಸೆಯುವುದನ್ನು ಕಂಡ ಸ್ಥಳೀಯರು ಕಾರಿನ ನೋಂದಣಿ ಸಂಖ್ಯೆ ಗುರುತಿಸಿ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ನೀಡಿದ್ದರು. ಈಗಾಗಲೇ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಸಹಿತ ವಿವಿಧೆಡೆ ತ್ಯಾಜ್ಯ ಎಸೆದು ಪರಿಸರ ಮಲಿನಗೊಳಿಸುವ ಪ್ರಕರಣಗಳಿಂದ ಹೈರಾಣಾಗಿ ಹೋಗಿದ್ದ ಪಂಚಾಯತ್ ಅಧ್ಯಕ್ಷ ರಮ್ಲಾನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರಿನ ನೋಂದಣಿ ಸಂಖ್ಯೆ ಸಹಿತವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡುವಂತೆ ಪಂಚಾಯತ್ ಪಿಡಿಒ ಅವರಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಪಿಡಿಒ ಅವರು ತ್ಯಾಜ್ಯ ಎಸೆದವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ಪಂಚಾಯತ್ ಪಿಡಿಒ ಅವರ ದೂರನ್ನು ಪರಿಗಣಿಸಿದ ಪೆÇಲೀಸರು ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ವ್ಯಕ್ತಿಯ ವಿಳಾಸ ಪತ್ತೆ ಹಚ್ಚಿ ಠಾಣೆಗೆ ಕರೆಸಿ ವಿಚಾರಿಸಿದ್ದರು. ಈ ಸಂದರ್ಭ ವ್ಯಕ್ತಿ ತಪ್ಪನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ ಸೂಕ್ತ ಎಚ್ಚರಿಕೆ ನೀಡಿ ಅವರನ್ನು ಪೊಲೀಸರು ಪಂಚಾಯತಿಗೆ ಹಸ್ತಾಂತರಿಸಿದ್ದರು. ಪಂಚಾಯತ್ ಕಚೇರಿಯಲ್ಲಿ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಅಧ್ಯಕ್ಷರು ಹಾಗೂ ಪಿಡಿಒ ಅವರು ತ್ಯಾಜ್ಯ ಎಸೆದ ಅಪರಾಧಕ್ಕೆ 3 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಕ್ರಮ ಜರುಗಿಸಿದ್ದಾರೆ.
ಪುದು ಗ್ರಾಮ ಪಂಚಾಯತ್ ತ್ಯಾಜ್ಯ ಎಸೆದ ಬಗ್ಗೆ ಇದೀಗ ಕೈಗೊಂಡ ಕಠಿಣ ಕ್ರಮ ಪಂಚಾಯತ್ ಸಹಿತ ಜಿಲ್ಲೆಯ ಇತರೆಡೆಗೂ ಎಚ್ಚರಿಕೆಯ ಸಂದೇಶದಂತಾಗಿದ್ದು, ಬಂಟ್ವಾಳ ಪುರಸಭೆ ಸಹಿತ ವಿವಿಧ ಪಂಚಾಯತ್ ಆಡಳಿತ ಕೂಡಾ ಇದೇ ರೀತಿ ಸಂಬಂಧಪಟ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಿದಲ್ಲಿ ಸ್ವಚ್ಛತೆಗೆ ಸವಾಲಾಗಿರುವ ಇಂತಹ ಕಿಡಿಗೇಡಿ ಕೃತ್ಯಗಳು ಸಹಜವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಸಾರ್ವಜನಿಕರ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
0 comments:
Post a Comment