ಬಂಟ್ವಾಳ, ಸೆಪ್ಟೆಂಬರ್ 02, 2021 (ಕರಾವಳಿ ಟೈಮ್ಸ್) : ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರಂತರ ತಪ್ಪು ಆರ್ಥಿಕ ನೀತಿಗಳಿಂದಾಗಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿರಂತರ ಗಗನಕ್ಕೇರುತ್ತಿದ್ದು, ಇದರಿಂದಾಗಿ ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟದಲ್ಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯಲ್ಲೂ ವಿಪರೀತ ಏರಿಕೆಯಾಗುತ್ತಿದೆ. ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿ ತೆರಿಗೆಗಳು ದುಬಾರಿಯಾಗುತ್ತಿದೆ. ಆದರೆ ಕಾರ್ಮಿಕರಿಗೆ ಸರಿಯಾದ ಕೆಲಸ ಇಲ್ಲ, ಇರುವ ಕೆಲಸದಲ್ಲಿ ಸಮರ್ಪಕ ವೇತನ ಕೈ ಸೇರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಂದಾಗಿ ಬಡ ಕಾರ್ಮಿಕರು ಬದುಕುವುದೇ ಕಷ್ಟಕರವಾಗುತ್ತಿದೆ. ಕೋವಿಡ್ ಸೋಂಕು, ಲಾಕ್ ಡೌನ್ ಸನ್ನಿವೇಶಗಳು ಬಡವರ ಬದುಕು ತೀರಾ ಕಷ್ಟದಲ್ಲಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದೀಗ ಏರುತ್ತಿರುವ ಬೆಲೆಗಳು ಕಾರ್ಮಿಕರ ಬದುಕಿನಲ್ಲಿ ದುಸ್ಥಿತಿ ಸೃಷ್ಟಿಸಿದೆ ಎಂದಿರುವ ಅಬ್ಬಾಸ್ ಅಲಿ ಬಡ ಕಾರ್ಮಿಕರ ಬದುಕಿಗೆ ಪರಿಹಾರ ಒದಗಿಸಬೇಕಾಗಿರುವುದು ಸರಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಚ್ಚೇ ದಿನ್ ಎಂಬ ಭ್ರಮಾಲೋಕ ಸೃಷ್ಟಿಸಿ ಅಧಿಕಾರಕ್ಕೇರಿರುವ ಸರಕಾರ ಇದೀಗ ಬಡವರ, ಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವುದು ಅತ್ಯಂತ ಖಂಡನೀಯ ಎಂದಿರುವ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಅಲಿ ಅವರು, ಇನ್ನು ಕೋವಿಡ್ ಸಂಕಷ್ಟಕ್ಕಾಗಿ ಸರಕಾರ ಕಾರ್ಮಿಕರಿಗೆ ಘೋಷಿಸಿರುವ ಪರಿಹಾರ ಮೊತ್ತ ಹಾಗೂ ಆಹಾರ ಕಿಟ್ ಗಳೂ ಕೂಡಾ ಸರಿಯಾದ ಸಮಯದಲ್ಲಿ ಕೈ ಸೇರದೆ ಅಲ್ಲೂ ಕಾರ್ಮಿಕರು ಅನ್ಯಾಯಕ್ಕೊಳಗಾಗಿದ್ದಾರೆ. ಇತ್ತ ಪರಿಹಾರ ಮೊತ್ತವೂ ಬಾರದೆ, ಅತ್ತ ಈ ಬಗ್ಗೆ ಪ್ರಶ್ನಿಸಿದರೆ ಸಮರ್ಪಕ ಉತ್ತರವೂ ಸಿಗುವುದಿಲ್ಲ ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೌರವದಿಂದ ಕಷ್ಟಪಟ್ಟು ದುಡಿದು ಬದುಕುತ್ತಿರುವ ಕಾರ್ಮಿಕ ವರ್ಗದ ಬದುಕಿನ ಅಯೋಮಯ ಪರಿಸ್ಥಿತಿಯನ್ನು ಸರಕಾರ ತಕ್ಷಣ ಅರ್ಥ ಮಾಡಿಕೊಂಡು ಬಡ ಕಾರ್ಮಿಕ ವರ್ಗದ ಹಿತ ಕಾಪಾಡಲು ಜೀವನಾಶ್ಯಕ ವಸ್ತುಗಳ ಬೆಲೆಯನ್ನು ಇಳಿಸಲು ಶೀಘ್ರ ಕಾರ್ಯಪ್ರವೃತ್ತವಾಗುವಂತೆ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಆಗ್ರಹಿಸಿದ್ದಾರೆ.
0 comments:
Post a Comment