ಬೆಂಗಳೂರು, ಸೆಪ್ಟೆಂಬರ್ 18, 2021 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಪ್ರಿಮೆಟ್ರಿಕ್ (ಒಂದನೇ ತರಗತಿಯಿಂದ 10ನೇ ತರಗತಿವರೆಗೆ), ಪೋಸ್ಟ್ ಮೆಟ್ರಿಕ್ (ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ) ಹಾಗೂ ಮೆರಿಟ್ ಕಂ ಮೀನ್ಸ್ (ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ) ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ (ಎನ್.ಎಸ್.ಪಿ) ಮೂಲಕ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಕ್ರಮವಾಗಿ ನವೆಂಬರ್ 15 ಹಾಗೂ 30 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿರುತ್ತದೆ. ಈ ಬಾರಿ ಆನ್ ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಹಾರ್ಡ್ ಕಾಪಿಯನ್ನು ಶಾಲಾ-ಕಾಲೇಜಿಗೆ ಮಾತ್ರ ಸಲ್ಲಿಸಿದರೆ ಸಾಕಾಗುವುದು. ಕಳೆದ ವರ್ಷದಂತೆ ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಕಚೇರಿಗೆ ಅಥವಾ ಮಾಹಿತಿ ಕೇಂದ್ರಗಳಿಗೆ ಸಲ್ಲಿಸುವ ಅವಶ್ಯಕತೆ ಇಲ್ಲ.
ಪ್ರಿಮೆಟ್ರಿಕ್ ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿಯ ಎರಡು ಪ್ರತಿಗಳನ್ನು ಪೂರಕ ದಾಖಲೆಗಳೊಂದಿಗೆ ಶಾಲಾ ಮುಖ್ಯಸ್ಥರಿಗೆ ನೀಡತಕ್ಕದ್ದು. ಶಾಲಾ ಮುಖ್ಯಸ್ಥರು ಅದರ ಒಂದು ಪ್ರತಿಯನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸತಕ್ಕದ್ದು. ಪೋಸ್ಟ್ ಮೆಟ್ರಿಕ್ ಹಾಗೂ ಎಂಸಿಎಂ ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿಯ ಒಂದು ಪ್ರತಿಯನ್ನು ಕಾಲೇಜಿಗೆ ಸಲ್ಲಿಸತಕ್ಕದ್ದು. ಉಳಿದಂತೆ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ರಾಜ್ಯ ನೋಡಲ್ ಅಧಿಕಾರಿಗೆ ಕಡತ ಆನ್ ಲೈನ್ ಮೂಲಕ ಮುಂದುವರಿಯುತ್ತದೆ. ವಿದ್ಯಾರ್ಥಿಗಳು ಖುದ್ದು ಅಲ್ಪಸಂಖ್ಯಾತ ಇಲಾಖಾ ಜಿಲ್ಲಾ ಕಚೇರಿಗಾಗಲೀ ಅಥವಾ ಮಾಹಿತಿ ಕೇಂದ್ರಕ್ಕಾಗಲೀ ಖುದ್ದಾಗಿ ಭೇಟಿ ನೀಡಿ ಸಲ್ಲಿಸುವ ಅವಶ್ಯಕತೆ ಇಲ್ಲ. ಎ
ಎನ್.ಎಸ್.ಪಿ. (ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶ) ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎಸ್.ಎಸ್.ಪಿ. (ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ) ಮೂಲಕವೂ ಆನ್ ಲೈನ್ ಅರ್ಜಿ ಸಲ್ಲಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ವಿದ್ಯಾರ್ಥಿ ವೇತನ ಮಂಜೂರಾತಿ ಆಗುವುದಿಲ್ಲ ಎಂದು ಅಲ್ಪಸಂಖ್ಯಾತ ಇಲಾಖಾ ಕಚೇರಿ ಪ್ರಕಟಣೆ ಮಾಹಿತಿ ನೀಡಿದೆ.
0 comments:
Post a Comment