ಪುತ್ತೂರು, ಸೆಪ್ಟಂಬರ್ 21, 2021 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಸರಣಿ ನೈತಿಕ ಗೂಂಡಾಗಿರಿ ಪ್ರಕರಣಗಳು ನಡೆದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇತ್ತೀಚೆಗೆ ಅಂತಹದೇ ಪ್ರಕರಣ ನಡೆದಿದ್ದು, ಇದರಿಂದ ಎಚ್ಚೆತ್ತುಕೊಂಡ ಸ್ವತಃ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳೇ ಗೂಂಡಾಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಈ ನಡುವೆ ಪೊಲೀಸ್ ಅಧಿಕಾರಿಗಳಿಗೂ ಇಂತಹ ಪ್ರಕರಣ ಮಟ್ಟಹಾಕಲು ಹೆಚ್ಚಿನ ಅಧಿಕಾರ ನೀಡಿ ಸೂಚನೆ ನೀಡಿದ್ದರು. ಈ ನಡುವೆ ಪೊಲೀಸರಿಗೇ ಸವಾಲೆಂಬಂತೆ ಇದೀಗ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇನ್ನೊಂದು ಗೂಂಡಾಗಿರಿ ಪ್ರಕರಣ ದಾಖಲಾಗಿದ್ದು ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ.
ಬೆಂಗಳೂರು ಅನೇಕಲ್ ನಿವಾಸಿ ರಾಜೇಶ್ವರಿ (36) ಎಂಬವರು ಪುತ್ತೂರು ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ಕಾರನ್ನು ಠಾಣೆಯಿಂದ ಬಿಡಿಸಿಕೊಳ್ಳಲು ತನ್ನಿಬ್ಬರು ಪುರುಷ ಸಹೋದ್ಯೋಗಿಗಳೊಂದಿಗೆ ಬಂದಿದ್ದ ಸಂದರ್ಭ ಪುತ್ತೂರು ಅಶ್ಮಿ ಲಾಡ್ಜ್ ನಲ್ಲಿರುವ ಹೋಟೆಲಿನಲ್ಲಿ ಸೋಮವಾರ ಸಂಜೆ ಊಟ ಮಾಡುತ್ತಿದ್ದ ವೇಳೆ ಐವರ ತಂಡ ಹೆಸರು ವಿಳಾಸ ಕೇಳಿ, ನಿಂದನೆ ಮಾಡಿ ಹಲ್ಲೆ ನಡೆಸಿ ನೈತಿಕ ಪೊಲೀಸ್‍ಗಿರಿ ಮೆರೆದಿದೆ ಎಂದು ರಾಜೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಪುತ್ತೂರಿನ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬೆಂಗಳೂರು ನಿವಾಸಿ ರಾಜೇಶ್ವರಿ ಅವರು ಪ್ರಕರಣವೊಂದರ ಬಾಬ್ತು ಪುತ್ತೂರು ನಗರ ಪೆÇಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕೆಎ 05 ಎನ್ ಬಿ 7355 ನೋಂದಣಿ ಸಂಖ್ಯೆಯ ಕಾರನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ತಾಲೂಕು, ಉಳ್ಳಾಲ ನಿವಾಸಿ ಯು ಕೆ ಮಹಮ್ಮದ್ ಅರಾಫತ್ ಹಾಗೂ ಬೆಂಗಳೂರು-ಕೊಟ್ಟಿಗೇರಿ ನಿವಾಸಿ ಶಿವ ಅವರ ಜೊತೆ ಬಾಡಿಗೆ ವಾಹನದಲ್ಲಿ ಸೆ 17 ರಂದು ರಾತ್ರಿ ಬೆಂಗಳೂರಿನಿಂದ ಜೊತೆಯಾಗಿ ಹೊರಟು ಸೆ 18 ರಂದು ಬೆಳಿಗ್ಗೆ ಪುತ್ತೂರು ತಲುಪಿ ಪುತ್ತೂರು ಕಸಬಾ ಗ್ರಾಮದಲ್ಲಿರುವ ಆಶ್ಮಿ ಲಾಡ್ಜ್ ನಲ್ಲಿ ತಂಗಿದ್ದು, ಸೆ 20 ರಂದು ಸಂಜೆ 6.55 ಗಂಟೆಗೆ ಅದೇ ಲಾಡ್ಜಿನ ಹೋಟೆಲಿನಲ್ಲಿ ಜೊತೆಯಾಗಿ ಊಟ ಮಾಡಿಕೊಂಡಿದ್ದ ವೇಳೆ ಲಾಡ್ಜ್ ಹೊರಗಡೆ ನಿಂತುಕೊಂಡಿದ್ದ ಸುಮಾರು 10 ಜನರ ಪೈಕಿ ನಾಲ್ಕೈದು ಮಂದಿ ಬಂದು ಹೆಸರು ವಿಳಾಸ ಕೇಳಿ ಅವಾಚ್ಯ ಶಬ್ದಗಳಿಂದ ಬೈದು ರಾಜೇಶ್ವರಿ ಅವರ ಜೊತೆಗಿದ್ದ ಶಿವ ಅವರಿಗೆ ಹಲ್ಲೆ ನಡೆಸಿ ಭಾವಚಿತ್ರ ತೆಗೆದು ಅವಮಾನಿಸಿರುತ್ತಾರೆ ಎಂದು ರಾಜೇಶ್ವರಿ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಂತೆ ಅಪರಾಧ ಕ್ರಮಾಂಖ 70/2021 ಕಲಂ 143, 147, 323, 504, 509 ಜೊತೆಗೆ 149 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment